ADVERTISEMENT

ಸಿಂಗಪುರದಲ್ಲಿ ಸೇನಾ ತರಬೇತಿಗೆ ಸೇರಿದ ಲಾಲೂ ಪ್ರಸಾದ್ ಮೊಮ್ಮಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2026, 6:12 IST
Last Updated 7 ಜನವರಿ 2026, 6:12 IST
   

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮಗಳು ರೋಹಿಣಿ ಆಚಾರ್ಯ ಅವರ ಹಿರಿಯ ಮಗ ಆದಿತ್ಯ ಅವರು ಸಿಂಗಪುರದಲ್ಲಿ ಮೂಲಭೂತ ಸೇನಾ ತರಬೇತಿಯನ್ನು(ಬಿಎಂಟಿ) ಪ್ರಾರಂಭಿಸಿದ್ದಾರೆ.

ಈ ಬಗ್ಗೆ ರೋಹಿಣಿ ಆಚಾರ್ಯ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

‘ಇಂದು ನನ್ನ ಹೃದಯ ಹೆಮ್ಮೆಯಿಂದ ತುಂಬಿದೆ. ಪದವಿ ಪೂರ್ವ ಶಿಕ್ಷಣ ಮುಗಿಸಿದ ನಂತರ ನನ್ನ ಹಿರಿಯ ಮಗ ಆದಿತ್ಯ ಕೇವಲ 18 ವರ್ಷ ವಯಸ್ಸಿನಲ್ಲಿ ಎರಡು ವರ್ಷಗಳ ಸೇನಾ ತರಬೇತಿ ಆರಂಭಿಸಿದ್ದಾನೆ’ ಎಂದು ಅವರು ಬರೆದುಕೊಂಡಿದ್ದಾರೆ.

ADVERTISEMENT

‘ಆದಿತ್ಯ.... ನೀವು ಧೈರ್ಯಶಾಲಿ ಮತ್ತು ಶಿಸ್ತುಬದ್ಧ ವ್ಯಕ್ತಿ. ಅಲ್ಲಿ ಹೋಗಿ ಒಳ್ಳೆಯ ಕೆಲಸಗಳನ್ನು ಮಾಡು. ಯೋಧರು ಜೀವನದ ಕಠಿಣ ಯುದ್ಧಗಳಿಂದ ರೂಪಿಸಲ್ಪಟ್ಟಿದ್ದಾರೆ ಎಂಬುದನ್ನು ಮರೆಯದಿರು. ನಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಯಾವಾಗಲೂ ನಿನ್ನೊಂದಿಗೆ ಇರುತ್ತದೆ’ ಎಂದು ಹೇಳಿದ್ದಾರೆ.

ಸಿಂಗಪುರದಲ್ಲಿ ‘ರಾಷ್ಟ್ರೀಯ ಸೇವೆ’ ಉಪಕ್ರಮದಡಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಸೇನಾ ತರಬೇತಿ ಅವುಗಳಲ್ಲಿ ಒಂದಾಗಿದೆ. ಯುವಕರಲ್ಲಿ ಶಿಸ್ತು, ದೈಹಿಕ ಸದೃಢತೆ, ನಾಯಕತ್ವ ಕೌಶಲಗಳನ್ನು ಬೆಳೆಸುವ ಉದ್ದೇಶಗಳನ್ನು ಇದು ಹೊಂದಿದೆ.

ತರಬೇತಿ ವೇಳೆ ಮಿಲಿಟರಿ ಡ್ರಿಲ್‌, ಶಸ್ತ್ರಾಸ್ತ್ರ ನಿರ್ವಹಣೆಯ ಮೂಲಭೂತ ಅಂಶಗಳು ಸೇರಿದಂತೆ ಹಲವು ರೀತಿಯ ತರಬೇತಿಯನ್ನು ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.