ADVERTISEMENT

ಮೂತ್ರಪಿಂಡ ವೈಫಲ್ಯ: ಹದಗೆಟ್ಟ ಲಾಲು ಆರೋಗ್ಯ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 17:42 IST
Last Updated 1 ಸೆಪ್ಟೆಂಬರ್ 2019, 17:42 IST
ಲಾಲು ಪ್ರಸಾದ್
ಲಾಲು ಪ್ರಸಾದ್   

ಪಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಭಾನುವಾರ ತಿಳಿಸಿದರು.

‘ಆ್ಯಂಟಿ ಬಯಾಟಿಕ್‌ಗಳ ಅತಿಯಾದ ಸೇವನೆಯಿಂದ ಮೂತ್ರಪಿಂಡದ ವೈಫಲ್ಯವೂ ಸೇರಿ ಅವರಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿವೆ. ಅವರ ಮೂತ್ರಪಿಂಡಗಳು ಶೇಕಡ 63ರಷ್ಟು ವಿಫಲಗೊಂಡಿವೆ. ರಕ್ತದೊತ್ತಡವೂ ಏರುಪೇರು ದಾಖಲಿಸುತ್ತಿದೆ. ಆ್ಯಂಟಿ ಬಯಾಟಿಕ್‌ಗಳ ಪರಿಣಾಮ ಕಡಿಮೆ ಆದನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ’ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಡಿ.ಕೆ. ಝಾ ಹೇಳಿದ್ದಾರೆ.

ಮೇವು ಹಗರಣದ ಆರೋಪಿಯಾಗಿದ್ದ ಲಾಲು ಅವರಿಗೆ 2017ರಲ್ಲಿ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿಗೆ ಕಳುಹಿಸಿದ ಕೆಲವೇ ದಿನಗಳಲ್ಲಿ ಅವರಲ್ಲಿ ರಕ್ತದೊತ್ತಡ ಹಾಗೂ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ರಾಂಚಿಯ ಜೈಲಿನಿಂದ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ (ರಿಮ್ಸ್‌) ಸ್ಥಳಾಂತರಿಸಲಾಗಿತ್ತು. ಟೈಪ್‌–2 ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ತುತ್ತಾಗಿರುವ ಅವರಿಗೆ, ಹೃದಯ ಕವಾಟದ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.