ADVERTISEMENT

ಲತಾ ಅವರ ರಾಮ ಭಜನೆ ನನ್ನ ರಥಯಾತ್ರೆಯ ಅಂಕಿತರಾಗವಾಗಿತ್ತು: ಅಡ್ವಾಣಿ

ಪಿಟಿಐ
Published 6 ಫೆಬ್ರುವರಿ 2022, 10:22 IST
Last Updated 6 ಫೆಬ್ರುವರಿ 2022, 10:22 IST
ಪಟನಾದ ಸಂತ ಪಶುಪತಿನಾಥ ವೇದಿಕ್‌ ಶಾಲೆಯಲ್ಲಿ ಲತಾ ಮಂಗೇಶ್ಕರ್‌ ಭಾವಚಿತ್ರದ ಮುಂದೆ ಮೇಣದ ಬತ್ತಿ ಉರಿಸಿ ಸಂತಾಪ ಸೂಚಿಸಿದರು. ಪಿಟಿಐ ಚಿತ್ರ
ಪಟನಾದ ಸಂತ ಪಶುಪತಿನಾಥ ವೇದಿಕ್‌ ಶಾಲೆಯಲ್ಲಿ ಲತಾ ಮಂಗೇಶ್ಕರ್‌ ಭಾವಚಿತ್ರದ ಮುಂದೆ ಮೇಣದ ಬತ್ತಿ ಉರಿಸಿ ಸಂತಾಪ ಸೂಚಿಸಿದರು. ಪಿಟಿಐ ಚಿತ್ರ   

ಹೊಸದಿಲ್ಲಿ: 1990ರಲ್ಲಿ ನಡೆಸಿದ 'ರಾಮ ರಥ ಯಾತ್ರೆ'ಗೆ ಗಾಯಕಿ ಲತಾ ಮಂಗೇಶ್ಕರ್‌ ಅವರು ಹಾಡಿರುವ 'ರಾಮ ಭಜನೆ'ಯು ಅಂಕಿತರಾಗವಾಗಿತ್ತು ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಸ್ಮರಿಸಿದ್ದಾರೆ.

'ಲತಾ ಮಂಗೇಶ್ಕರ್‌ ಅವರು ಸಂಗೀತ ಲೋಕದಲ್ಲಿ ಎಂದೂ ಅಳಿಸಲಾಗದ ಶ್ರೇಷ್ಠತೆಯ ಗುರುತಾಗಿದ್ದಾರೆ. ವಿಶ್ವದಾದ್ಯಂತ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ. ರಾಷ್ಟ್ರವು ನಿಜಕ್ಕೂ ಅವರನ್ನು ಮಿಸ್‌ ಮಾಡಿಕೊಳ್ಳುತ್ತದೆ' ಎಂದು ಅಡ್ವಾಣಿ ಅವರು ತಿಳಿಸಿದ್ದಾರೆ.

'ಮುಂಬರುವ ಹಲವು ಪೀಳಿಗೆಯ ಸಂಗೀತ ಕಲಾವಿದರಿಗೆ ಲತಾ ಮಂಗೇಶ್ಕರ್‌ ಸ್ಫೂರ್ತಿಯಾಗಿರಲಿದ್ದಾರೆ. ನನ್ನ ಸಾರ್ವಕಾಲಿಕ ಮೆಚ್ಚಿನ ಗಾಯಕರ ಪೈಕಿ ಲತಾ ಜೀ ಕೂಡ ಒಬ್ಬರು. ಅವರ ಜೊತೆಗಿನ ದೀರ್ಘಕಾಲದ ಒಡನಾಟ ಸಿಕ್ಕಿದ್ದೇ ಅದೃಷ್ಟವೆಂದು ಭಾವಿಸುತ್ತೇನೆ.

ADVERTISEMENT

ಸುಂದರ ಗೀತೆ 'ಶ್ರೀ ರಾಮ ಭಜನೆ'ಯ ರೆಕಾರ್ಡಿಂಗ್‌ ಸಂದರ್ಭವನ್ನು ಸ್ಮರಿಸಲು ಇಷ್ಟಪಡುತ್ತೇನೆ. ಸೋಮನಾಥದಿಂದ ಆಯೋಧ್ಯೆಗೆ ರಾಮ ರಥ ಯಾತ್ರೆಯನ್ನು ಆರಂಭಿಸುವ ಸಂದರ್ಭ ಭಜನೆಯನ್ನು ರೆಕಾರ್ಡ್‌ ಮಾಡಿ ಕಳುಹಿಸಿದ್ದರು.

ಸ್ಮರಣೀಯ ಹಾಡದು. ರಾಮ ನಾಮ್‌ ಮೈ ಜಾದು ಐಸಾ, ರಾಮ್‌ ನಾಮ್‌ ಮನ್‌ ಭಾಯೆ, ಮನ್‌ ಕಿ ಅಯೋಧ್ಯಾ ತಬ್‌ ತಕ್‌ ಸೂನಿ, ಜಬ್‌ ತಕ್‌ ರಾಮ್‌ ನಾ ಆಯೆ - ಸಾಲುಗಳಿರುವ ಹಾಡು ನನ್ನ ರಥ ಯಾತ್ರೆಯ ಅಂಕಿತರಾಗವಾಯಿತು' ಎಂದು ಅಡ್ವಾಣಿ ಹೇಳಿದರು.

ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಆರಂಭಗೊಂಡ ರಥ ಯಾತ್ರೆಗೆ ಭಾರಿ ಸ್ಪಂದನೆ ವ್ಯಕ್ತವಾಗಿತ್ತು. ಇದರಿಂದ ಬಿಜೆಪಿಗೆ ರಾಷ್ಟ್ರದಲ್ಲಿ ಸದೃಢ ರಾಜಕೀಯ ಪಕ್ಷವಾಗಿ ನೆಲೆಯೂರಲು ಸಾಧ್ಯವಾಯಿತು.

92 ವರ್ಷದ ಲತಾ ಅವರು ಭಾನುವಾರ ಬೆಳಗ್ಗೆ 8.12ಕ್ಕೆ ನಿಧನರಾದರು. ಕೋವಿಡ್‌–19 ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಜನವರಿ 8ರಂದು ದಾಖಲಾಗಿದ್ದರು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.

ಜ್ಯೋತಿ ಕಲಶ್‌ ಚಲ್‌ ಕೇ: ಅಡ್ವಾಣಿ ಮೆಚ್ಚಿನ ಹಾಡು
ಲತಾ ಅವರು ಉತ್ತಮ ವ್ಯಕ್ತಿ. ಅವರ ಸರಳತೆ, ಉತ್ಸಾಹ ಮತ್ತು ಅದೆಲ್ಲದಕ್ಕಿಂತ ಹೆಚ್ಚಾಗಿ ರಾಷ್ಟ್ರದ ಮೇಲಿನ ಪ್ರೀತಿ ನನ್ನ ಹೃದಯವನ್ನು ತಟ್ಟಿತ್ತು. ಲತಾ ಅವರು ಹಾಡಿರುವ ಹಿಂದಿ ಸಿನಿಮಾ ಹಾಡುಗಳ ಪೈಕಿ 'ಜ್ಯೋತಿ ಕಲಶ್‌ ಚಲ್‌ ಕೇ' ನನ್ನ ಅಚ್ಚುಮೆಚ್ಚಿನ ಹಾಡಾಗಿದೆ. ಹಲವು ಸಾರ್ವಜನಿಕ ಸಭೆಗಳಲ್ಲಿ ನನ್ನ ಕೋರಿಕೆ ಮೇರೆಗೆ ಲತಾ ಅವರು ಈ ಹಾಡನ್ನು ಹಾಡಿದ್ದಾರೆ' ಎಂದು ಅಡ್ವಾಣಿ ಅವರು ತಿಳಿಸಿದರು.ಇದು 1961ರಲ್ಲಿ ಬಿಡುಗಡೆಯಾದ 'ಬಾಭಿ ಕೀ ಚುಡಿಯಾ' ಚಿತ್ರದ ಹಾಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.