ಮಲ್ಲಿಕಾರ್ಜನ ಖರ್ಗೆ
(ಪ್ರಜಾವಾಣಿ ಚಿತ್ರ)
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಾಯಕರ ವಿರೋಧದಿಂದಾಗಿ ಕೇಂದ್ರ ಸರ್ಕಾರವು ‘ಲ್ಯಾಟರಲ್ ಎಂಟ್ರಿ’ ನೇಮಕಾತಿಯಿಂದ ಹಿಂದೆ ಸರಿದಿದೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.
ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರನ್ನು ಮೂಲಕ ನೇಮಕ ಮಾಡಿಕೊಳ್ಳುವ ಸಂಬಂಧ ಹೊರಡಿಸಿದ್ದ ಜಾಹೀರಾತನ್ನು ಸರ್ಕಾರದ ಸೂಚನೆಯಂತೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ವಾಪಸ್ ಪಡೆದುಕೊಂಡಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ‘ಸಂವಿಧಾನಕ್ಕೆ ಜಯವಾಗಲಿ. ದಲಿತರು, ಬುಡಕಟ್ಟು ಜನರು, ಹಿಂದುಳಿದ ಮತ್ತು ದುರ್ಬಲ ವರ್ಗದವರ ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಪಕ್ಷವು ನಡೆಸಿರುವ ಹೋರಾಟವು, ಮೀಸಲಾತಿ ಕಸಿದುಕೊಳ್ಳುವ ಬಿಜೆಪಿಯ ಯೋಜನೆಗಳನ್ನು ವಿಫಲಗೊಳಿಸಿದೆ’ ಎಂದಿದ್ದಾರೆ. ‘ಆದರೆ ಬಿಜೆಪಿ- ಆರ್‌ಎಸ್‌ಎಸ್ ಅಧಿಕಾರದಲ್ಲಿರುವ ವರೆಗೂ ಮೀಸಲಾತಿಯನ್ನು ಕಸಿದು ಕೊಳ್ಳಲು ಹೊಸ ತಂತ್ರಗಳನ್ನು ಅನುಸರಿಸುತ್ತಲೇ ಇರುತ್ತಾರೆ. ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ 45 ಹುದ್ದೆಗಳಿಗೆ ನೇಮಕಾತಿ ಸಂಬಂಧ ಯುಪಿಎಸ್‌ಸಿ, ಆ.17ರಂದು ಜಾಹೀರಾತು ಪ್ರಕಟಿ ಸಿತ್ತು. ಖಾಸಗಿ ವಲಯದವರೂ ಒಳ ಗೊಂಡಂತೆ ಪರಿಣತರು ಹಾಗೂ ತಜ್ಞರನ್ನು ‘ಲ್ಯಾಟರಲ್ ಎಂಟ್ರಿ’ ಮೂಲಕ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿತ್ತು. 10 ಜಂಟಿ ಕಾರ್ಯದರ್ಶಿಗಳು ಮತ್ತು 35 ನಿರ್ದೇಶಕರು/ಉಪ ಕಾರ್ಯದರ್ಶಿ ಹುದ್ದೆಗಳಿಗೆ ಆರ್ಜಿಗಳನ್ನು ಆಹ್ವಾನಿಸಿತ್ತು.
‘ಲ್ಯಾಟರಲ್ ಎಂಟ್ರಿ’ ನೇಮಕಾತಿಗೆ ಮುಂದಾಗಿರುವ ಸರ್ಕಾರವು ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿಗಳಿಗಿರುವ ಮೀಸಲಾತಿಯನ್ನು ಬಹಿರಂಗವಾಗಿಯೇ ಕಸಿದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
‘ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಎಂಬುದು ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ಮತ್ತು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದೆ. ಆದರೆ ‘ಲ್ಯಾಟರಲ್ ಎಂಟ್ರಿ’ ನೇಮಕಾತಿ ಗಳಲ್ಲಿ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ. ಪ್ರಧಾನಿ ಅವರು ಸಾಮಾಜಿಕ ನ್ಯಾಯದ ಪರ ಇರುವುದರಿಂದ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ಆಗಸ್ಟ್ 17ರಂದು ಹೊರಡಿಸಿದ್ದ ಜಾಹೀರಾತು ರದ್ದುಪಡಿಸಬೇಕು’ ಎಂದು ಕೇಂದ್ರ ಸಿಬ್ಬಂದಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಯುಪಿಎಸ್‌ಸಿ ಅಧ್ಯಕ್ಷೆ ಪ್ರೀತಿ ಸೂದನ್‌ಗೆ ಬರೆದ ಪತ್ರದಲ್ಲಿ ಸೂಚಿಸಿದ್ದರು.
ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ಸಮುದಾಯಗಳೆಡೆಗಿನ ಬದ್ಧತೆಯನ್ನು ಪುನರುಚ್ಚರಿಸಿದೆ.ಚಿರಾಗ್ ಪಾಸ್ವಾನ್, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.