ADVERTISEMENT

ಚುನಾವಣಾ ಆಯೋಗದ ಸದಸ್ಯರಲ್ಲಿ ಭಿನ್ನಾಭಿಪ್ರಾಯ

ಮೋದಿ– ಶಾ ಅವರಿಗೆ ಕ್ಲೀನ್‌ಚಿಟ್‌ ನೀಡಿದ್ದಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಮೇ 2019, 19:04 IST
Last Updated 18 ಮೇ 2019, 19:04 IST
   

ನವದೆಹಲಿ: ‘ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳಿಗೆ ಸಂಬಂಧಿಸಿದಂತೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಭೆಗಳಿಗೆ ಹಾಜರಾಗುವುದಿಲ್ಲ’ ಎಂದು ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಅಶೋಕ್‌ ಲವಾಸಾ ಶನಿವಾರ ಹೇಳಿದ್ದಾರೆ.

ನೀತಿ ಸಂಹಿತೆ ಉಲ್ಲಂಘಿಸಿದ ದೂರಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌
ಶಾ ಅವರಿಗೆ ಕ್ಲೀನ್‌ಚಿಟ್‌ ನೀಡಿದ್ದು ಲವಾಸಾ ಅವರ ಸಿಟ್ಟಿಗೆ ಕಾರಣ ಎನ್ನಲಾಗಿದೆ.

ಈ ಬಗ್ಗೆ ಮೇ 4ರಂದು ಲವಾಸಾ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದು, ‘ಆಯೋಗದ ಯಾವುದೇ ತೀರ್ಮಾನಕ್ಕೆ ಸದಸ್ಯರು ವ್ಯಕ್ತಪಡಿಸಿರುವ ವಿರೋಧವು ದಾಖಲಾಗದಿದ್ದರೆ ಸಭೆಗಳಲ್ಲಿ ಪಾಲ್ಗೊಳ್ಳುವುದೇ ಅರ್ಥಹೀನವಾಗುತ್ತದೆ. ಆಯೋಗವು ಕೆಲವು ತೀರ್ಮಾನಗಳನ್ನು ಕೈಗೊಳ್ಳುವಾಗ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ.

ADVERTISEMENT

ಮೋದಿ ಮತ್ತು ಶಾ ಅವರಿಗೆ ಕ್ಲೀನ್‌ಚಿಟ್‌ ನೀಡುವ ತೀರ್ಮಾನ ಒಮ್ಮತದ್ದಾಗಿರಲಿಲ್ಲ. ಆವಿಚಾರದಲ್ಲಿ ನನ್ನ ವಿರೋಧವನ್ನು ದಾಖಲಿಸಬೇಕಾಗಿತ್ತು’ ಎಂದು ಲವಾಸಾ ಹೇಳಿದ್ದಾರೆ ಎನ್ನಲಾಗಿದೆ.

ಕಲಹ ಇಲ್ಲ: ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರಾ, ‘ಆಯೋಗದಲ್ಲಿ ಯಾವುದೇ ಕಲಹವಿಲ್ಲ. ಇಂಥ ವಿಚಾರಗಳಲ್ಲಿ ವಿಭಿನ್ನ ನಿಲುವುಗಳು ಬರುವುದು ಸಹಜ ಮತ್ತು ಬರಲೇಬೇಕು’ ಎಂದಿದ್ದಾರೆ.

‘ದೂರಿನ ಸಂಬಂಧ ಆಯೋಗದ ತೀರ್ಮಾನವನ್ನು ಮಾತ್ರ ದೂರುದಾರರಿಗೆ ತಿಳಿಸಲಾಗುತ್ತದೆ. ಸಮಿತಿಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು ಸಂಬಂಧಪಟ್ಟ ಕಡತದಲ್ಲಿ ದಾಖಲಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ತನಿಖೆಗೆ ಆಗ್ರಹ

‘ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಮೋದಿ ಸರ್ಕಾರದ ಹೆಗ್ಗುರುತು. ಚುನಾವಣಾ ಆಯೋಗವನ್ನೂ ಸರ್ಕಾರ ತನ್ನ ಕೈಗೊಂಬೆಯಾಗಿಸಿದೆ. ಲವಾಸಾ ಅವರ ಆರೋಪದ ಬಗ್ಗೆ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್‌ ವಕ್ತಾರ ರಣ್‌ದೀಪ್‌ ಸುರ್ಜೆವಾಲಾ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.