ADVERTISEMENT

ಒಂದು ದೇಶ, ಒಂದು ಚುನಾವಣೆ: ಕೋವಿಂದ್‌ ಸಮಿತಿ ಜತೆ ಕಾನೂನು ಆಯೋಗ ಚರ್ಚೆ

ಪಿಟಿಐ
Published 25 ಅಕ್ಟೋಬರ್ 2023, 15:53 IST
Last Updated 25 ಅಕ್ಟೋಬರ್ 2023, 15:53 IST
ರಾಮನಾಥ ಕೋವಿಂದ್‌ –ಪಿಟಿಐ ಚಿತ್ರ
ರಾಮನಾಥ ಕೋವಿಂದ್‌ –ಪಿಟಿಐ ಚಿತ್ರ   

ನವದೆಹಲಿ : ‘ಒಂದು ದೇಶ, ಒಂದು ಚುನಾವಣೆ’ಯ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ನೇತೃತ್ವದಡಿ ರಚಿಸಿರುವ ಉನ್ನತಮಟ್ಟದ ಸಮಿತಿಯ ಜೊತೆ ಬುಧವಾರ ಕಾನೂನು ಆಯೋಗದ ಅಧ್ಯಕ್ಷ ಋತುರಾಜ್‌ ಅವಸ್ಥಿ ಹಾಗೂ ಸದಸ್ಯರು ಸುದೀರ್ಘವಾಗಿ ಚರ್ಚಿಸಿದರು.

ಲೋಕಸಭೆ, ರಾಜ್ಯ ವಿಧಾನಸಭೆ ಹಾಗೂ ಸ್ಥಳೀಯ ಸರ್ಕಾರಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯ ಮಂಡಿಸುವಂತೆ ಕಾನೂನು ಆಯೋಗಕ್ಕೆ, ಕೋವಿಂದ್‌ ಸಮಿತಿಯು ಕೋರಿತ್ತು.

ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಅಗತ್ಯ ತಿದ್ದುಪಡಿ ತರುವುದು ಹಾಗೂ ಮಾರ್ಗಸೂಚಿಗಳ ಬಗ್ಗೆ ಆಯೋಗವು ತನ್ನ ಅಭಿಪ್ರಾಯ ತಿಳಿಸಿತು. ಆದರೆ, ಈ ವಿಷಯಕ್ಕೆ ಸಂಬಂಧಿಸಿ ಮತ್ತಷ್ಟು ವಿವರಣೆಯ ಅಗತ್ಯವಿದೆ ಎಂದು ಸಮಿತಿ ಹೇಳಿದೆ. ಹಾಗಾಗಿ, ಮತ್ತೊಮ್ಮೆ ಆಯೋಗವನ್ನು ಚರ್ಚೆಗೆ ಆಹ್ವಾನಿಸುವ ಸಾಧ್ಯತೆ ಇದೆ. ಅಲ್ಲದೇ, ‘ಒಂದು ದೇಶ ಒಂದು ಚುನಾವಣೆ’ ಸಂಬಂಧ ಆಯೋಗವು ಕೇಂದ್ರ ಸರ್ಕಾರಕ್ಕೂ ವರದಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಳೆದ ತಿಂಗಳು ಕೋವಿಂದ್‌ ಸಮಿತಿಯ ಮೊದಲ ಸಭೆ ನಡೆದಿತ್ತು. ರಾಷ್ಟ್ರೀಯ ಪಕ್ಷಗಳು, ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಪ್ರಾದೇಶಿಕ ಪಕ್ಷಗಳು, ಸಂಸತ್‌ನಲ್ಲಿ ಪ್ರಾತಿನಿಧ್ಯ ಹೊಂದಿರುವ ಹಾಗೂ ರಾಜ್ಯಗಳಲ್ಲಿ ಮಾನ್ಯತೆ ಪಡೆದಿರುವ ಪಕ್ಷಗಳ ನಾಯಕರನ್ನು ಆಹ್ವಾನಿಸಿ ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ಸಲಹೆ, ಅಭಿಪ್ರಾಯ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಅಲ್ಲದೇ, ರಾಜಕೀಯ ಪಕ್ಷಗಳ ಜತೆ ಚರ್ಚಿಸಲು ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ. ಜೊತೆಗೆ, ಪಕ್ಷಗಳಿಗೆ ಮೂರು ತಿಂಗಳೊಳಗೆ ಪತ್ರದ ಮೂಲಕ ತಮ್ಮ ಅಭಿಪ್ರಾಯ ಸಲ್ಲಿಸುವ ಅವಕಾಶವನ್ನೂ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಮಿತಿಯ ಹೆಸರು ಬದಲಾವಣೆ

ಕೋವಿಂದ್‌ ನೇತೃತ್ವದ ಉನ್ನತಮಟ್ಟದ ಸಮಿತಿಯ ಎರಡನೇ ಸಭೆಯು ಬುಧವಾರ ನಡೆಯಿತು. ಸಮಿತಿಗೆ ‘ಒಂದು ದೇಶ; ಒಂದು ಚುನಾವಣೆಯ ಉನ್ನತಮಟ್ಟದ ಸಮಿತಿ’ ಎಂದು ಮರುನಾಮಕರಣ ಮಾಡಲಾಗಿದೆ. ಸೆಪ್ಟೆಂಬರ್‌ 2ರಂದು ಕೇಂದ್ರ ಸರ್ಕಾರವು ಈ ಸಮಿತಿ ರಚಿಸಿ ಅಧಿಸೂಚನೆ ಹೊರಡಿಸಿತ್ತು. ಏಕಕಾಲಕ್ಕೆ ಚುನಾವಣೆ ನಡೆದಾಗಲೂ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಎದುರಾಗುವ ಅತಂತ್ರ ಸ್ಥಿತಿ ಅವಿಶ್ವಾಸ ನಿರ್ಣಯ ಅಥವಾ ಪಕ್ಷಾಂತರ ಸಮಸ್ಯೆ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ. ಇದಕ್ಕೆ ಸಂಭಾವ್ಯ ಪರಿಹಾರೋಪಾಯದ ಬಗ್ಗೆಯೂ ಕೇಂದ್ರಕ್ಕೆ ಶಿಫಾರಸು ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.