ADVERTISEMENT

ಕೊಲಿಜಿಯಂ ವ್ಯವಸ್ಥೆಯಲ್ಲಿ ಸರ್ಕಾರದ ಪ್ರತಿನಿಧಿಗೂ ಸ್ಥಾನ ಕೊಡಿ: ಸಿಜೆಐಗೆ ಪತ್ರ

ಪಿಟಿಐ
Published 16 ಜನವರಿ 2023, 21:14 IST
Last Updated 16 ಜನವರಿ 2023, 21:14 IST
   

ನವದೆಹಲಿ: ನ್ಯಾಯಮೂರ್ತಿಗಳ ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಸರ್ಕಾರದ ಪ್ರತಿನಿಧಿಯನ್ನೂ ಸೇರಿಸಿಕೊಳ್ಳಬೇಕು ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ರಿಜಿಜು ಪತ್ರ ಬರೆದಿದ್ದಾರೆ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ರದ್ದುಪಡಿಸಿದಾಗ ಇಂತಹ ಸಲಹೆಯೊಂದನ್ನು ಸುಪ್ರೀಂ ಕೋರ್ಟ್‌ ಮುಂದಿಟ್ಟಿತ್ತು. ಅದನ್ನು ನೆನಪಿಸುವುದಕ್ಕಾಗಿ ಈ ಪತ್ರ ಬರೆಯಲಾಗಿದೆ ಎಂದು ತಮ್ಮ ನಡೆಯನ್ನು ರಿಜಿಜು ಸಮರ್ಥಿಸಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ ಆಯಾ ರಾಜ್ಯ ಸರ್ಕಾರದ ಪ್ರತಿನಿಧಿಗಳು ಇರುವ ‘ಶೋಧ ಮತ್ತು ಮೌಲ್ಯಮಾಪನ’ ಸಮಿತಿ ರಚಿಸಬೇಕು ಎಂಬ ಪ್ರಸ್ತಾವವನ್ನು ಕಾನೂನು ಸಚಿವರು ಇರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿ ನೇಮಕದ ಕುರಿತು ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ ಮಧ್ಯೆ ನಡೆಯುತ್ತಿರುವ ಜಟಾಪಟಿಯ ನಡುವೆಯೇ ರಿಜಿಜು ಅವರು ಪ‍ತ್ರ ಬರೆದಿದ್ದಾರೆ.

ಕೇಂದ್ರದ ಹಲವು ಸಚಿವರು ಎನ್‌ಜೆಎಸಿ ರದ್ದತಿಯ ವಿರುದ್ಧ ಇತ್ತೀಚೆಗೆ ಮಾತನಾಡಿದ್ದಾರೆ. ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರೂ ಇದಕ್ಕೆ ದನಿಗೂಡಿಸಿದ್ದಾರೆ. ಶಾಸಕಾಂಗದ ಕಾರ್ಯದಲ್ಲಿ ನ್ಯಾಯಾಂಗವು ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪವನ್ನು ಧನಕರ್ ಅವರು ಮಾಡಿದ್ದರು.

ಕೊಲಿಜಿಯಂ ವ್ಯವಸ್ಥೆಯು ಸಂವಿಧಾನಕ್ಕೆ ಅನುಗುಣವಾಗಿ ಇಲ್ಲ ಎಂದು ರಿಜಿಜು ಅವರು ಕಳೆದ ನವೆಂಬರ್‌ನಲ್ಲಿಯೂ ಹೇಳಿದ್ದರು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ಮಾರ್ಗಸೂಚಿ, ಬಡ್ತಿ, ವರ್ಗಾವಣೆ ವಿಚಾರಗಳಲ್ಲಿ ಏಳು ವರ್ಷಗಳ ಬಳಿಕವೂ ಸಹಮತಕ್ಕೆ ಬರಲು ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ ಕೊಲಿಜಿಯಂಗೆ ಸಾಧ್ಯವಾಗಿಲ್ಲ ಎಂದು ಸಂಸದೀಯ ಸಮಿತಿಯೊಂದು ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು.

ಸಂಸತ್ತು ಅವಿರೋಧವಾಗಿ ಅಂಗೀಕರಿಸಿದ್ದ ಎನ್‌ಜೆಎಸಿ ಕಾಯ್ದೆಯು ಅಸಾಂವಿಧಾನಿಕ ಎಂದು ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ 2015ರ ಅಕ್ಟೋಬರ್‌ನಲ್ಲಿ ರದ್ದು ಮಾಡಿತ್ತು.

ವಿರೋಧ ಪ‍ಕ್ಷಗಳ ಆಕ್ಷೇಪ
ನ್ಯಾಯಾಂಗ ನೇಮಕಾತಿಯಲ್ಲಿ ಸುಧಾರಣೆ ಅಗತ್ಯ ಇದೆ. ಆದರೆ, ಸರ್ಕಾರ ಸೂಚಿಸುತ್ತಿರುವ ಪರಿಹಾರವು ಸ್ವತಂತ್ರ ನ್ಯಾಯಾಂಗಕ್ಕೆ ವಿಷ ಕೊಡುವಂತೆ ಇದೆ. ನ್ಯಾಯಾಂಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸರ್ಕಾರವು ಯೋಜಿತ ಪ್ರಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಸರ್ಕಾರದ ನಡೆಯು ಅತ್ಯಂತ ಅಪಾಯಕಾರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ನ್ಯಾಯಾಂಗ ನೇಮಕಾತಿಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಲೇಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.

ಉಪರಾಷ್ಟ್ರಪತಿ ದಾಳಿ ನಡೆಸುತ್ತಿದ್ದಾರೆ. ಕಾನೂನು ಸಚಿವರು ದಾಳಿ ನಡೆಸುತ್ತಿದ್ದಾರೆ. ಇವೆಲ್ಲವೂ ನ್ಯಾಯಾಂಗವನ್ನು ಕೈವಶ ಮಾಡಿಕೊಳ್ಳುವುದಕ್ಕೆ ಇರುವ ವ್ಯವಸ್ಥಿತ ಕಾರ್ಯಾಚರಣೆ. ಕೊಲಿಜಿಯಂಗೆ ಸುಧಾರಣೆ ಅಗತ್ಯ. ಆದರೆ, ಸರ್ಕಾರ ಪೂರ್ಣ ಶರಣಾಗತಿ ಬಯಸುತ್ತಿದೆ’ ಎಂದು ಕಾಂಗ್ರೆಸ್ ಹೇಳಿದೆ.

ಕೊಲಿಜಿಯಂನ ಕಾರ್ಯವಿಧಾನವನ್ನು ಪುನರ್‌ ರೂಪಿಸಬೇಕು ಎಂದು ಎನ್‌ಜೆಎಸಿಯನ್ನು ರದ್ದುಪಡಿಸಿದ್ದ ಸಂವಿಧಾನ ಪೀಠವು ಹೇಳಿತ್ತು. ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರವು ಆ ತೀರ್ಪಿಗೆ ಅನುಗುಣವಾಗಿ ಇದೆ. ಅನುಕೂಲಸಿಂಧು ರಾಜಕಾರಣ ಸರಿಯಲ್ಲ, ಅದೂ ನ್ಯಾಯಾಂಗದ ಹೆಸರಿನಲ್ಲಿ. ಭಾರತದ ಸಂವಿಧಾನವೇ ಸರ್ವೋಚ್ಚ. ಅದಕ್ಕಿಂತ ಮೇಲೆ ಯಾರೂ ಇಲ್ಲ ಎಂದು ರಿಜಿಜು ಅವರು ಆಕ್ಷೇಪಗಳಿಗೆ ಉತ್ತರವಾಗಿ ಟ್ವೀಟ್‌ ಮಾಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.