ADVERTISEMENT

ಕೋಲ್ಕತ್ತ ಸಾಮೂಹಿಕ ಅತ್ಯಾಚಾರ ಪೂರ್ವಯೋಜಿತ: ಪೊಲೀಸರ ಹೇಳಿಕೆ

ಪಿಟಿಐ
Published 30 ಜೂನ್ 2025, 13:45 IST
Last Updated 30 ಜೂನ್ 2025, 13:45 IST
ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಕೋಲ್ಕತ್ತದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಕಾನೂನು ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡರು –ಪಿಟಿಐ ಚಿತ್ರ
ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಕೋಲ್ಕತ್ತದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಕಾನೂನು ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡರು –ಪಿಟಿಐ ಚಿತ್ರ   

ಕೋಲ್ಕತ್ತ: ಇಲ್ಲಿನ ಕಾನೂನು ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣ ‘ಪೂರ್ವಯೋಜಿತ ಕೃತ್ಯ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳಲ್ಲಿ ಮೂವರು, ಮೊದಲೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಭದ್ರತಾ ಸಿಬ್ಬಂದಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಮೂವರು ಆರೋಪಿಗಳಾದ ಮನೋಜಿತ್‌ ಮಿಶ್ರಾ, ಪ್ರತಿಮ್‌ ಮುಖರ್ಜಿ ಮತ್ತು ಝೈದ್‌ ಅಹ್ಮದ್ ಈ ಹಿಂದೆ ಕೂಡಾ ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದು ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆ ವೇಳೆ ಬಯಲಾಗಿದೆ.

ADVERTISEMENT

ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ದೃಶ್ಯವನ್ನು ಈ ಮೂವರು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ರೆಕಾರ್ಡ್‌ ಮಾಡಿಟ್ಟುಕೊಂಡು ಸಂತ್ರಸ್ತೆಯರನ್ನು ಬ್ಲ್ಯಾಕ್‌ಮೇಲ್‌ ಮಾಡಲು ಬಳಸಿಕೊಳ್ಳುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

‘ಇಡೀ ಘಟನೆಯು ಪೂರ್ವಯೋಜಿತವಾಗಿತ್ತು. ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಲು ಈ ಮೂವರು ಹಲವು ದಿನಗಳಿಂದ ಸಂಚು ರೂಪಿಸಿದ್ದರು. ಸಂತ್ರಸ್ತೆ ಕಾಲೇಜಿಗೆ ಪ್ರವೇಶ ಪಡೆದ ಮೊದಲ ದಿನದಿಂದಲೇ ಆರೋಪಿಗಳು ಆಕೆಯನ್ನು ಗುರಿಯಾಗಿಸಿರುವುದು ಗಮನಕ್ಕೆ ಬಂದಿದೆ’ ಎಂದಿದ್ದಾರೆ.

ಈ ಮೂವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ ಎನ್ನಲಾದ ವಿಡಿಯೊಗಳ ಪತ್ತೆಗೆ ಕೋಲ್ಕತ್ತ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ‘ಆರೋಪಿಗಳಾದ ಮುಖರ್ಜಿ ಮತ್ತು ಅಹ್ಮದ್‌ನ ನಿವಾಸಗಳಲ್ಲಿ ಭಾನುವಾರ ಶೋಧ ನಡೆಸಲಾಗಿದೆ. ಈಗಿನ ಘಟನೆಗೆ ಸಂಬಂಧಿಸಿದ ಮತ್ತು ಈ ಹಿಂದೆ ಮಾಡಿದ್ದಾರೆ ಎನ್ನಲಾದ ಕೃತ್ಯಗಳಿಗೆ ಸಂಬಂಧಿಸಿದ ವಿಡಿಯೊಗಳಿಗೆ ಹುಡುಕಾಟ ನಡೆಸುತ್ತಿದ್ದೇವೆ’ ಎಂದು ಅಧಿಕಾರಿ ತಿಳಿಸಿದರು.

ತರಗತಿ ರದ್ದು: ದಕ್ಷಿಣ ಕೋಲ್ಕತ್ತ ಕಾನೂನು ಕಾಲೇಜಿನ ಎಲ್ಲ ತರಗತಿಗಳನ್ನು ಅನಿರ್ದಿಷ್ಟಾವಧಿಯವರೆಗೆ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಸೋಮವಾರ ಹೇಳಿದೆ.

ಪಿಐಎಲ್‌ ಸಲ್ಲಿಸಲು ವಕೀಲರಿಗೆ ಅನುಮತಿ

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸಲ್ಲಿಸಲು ಕಲ್ಕತ್ತಾ ಹೈಕೋರ್ಟ್ ಮೂವರು ವಕೀಲರಿಗೆ ಸೋಮವಾರ ಅನುಮತಿ ನೀಡಿದೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಮತ್ತು ಪಶ್ಚಿಮ ಬಂಗಾಳದಾದ್ಯಂತ ಕಾಲೇಜುಗಳಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಕೀಲರು ಕೋರಿದ್ದಾರೆ. ಈ ಮೂವರಿಗೆ ಪ್ರತ್ಯೇಕ ಪಿಐಎಲ್‌ ಸಲ್ಲಿಸಲು ನ್ಯಾಯಮೂರ್ತಿ ಸೌಮೇನ್ ಸೇನ್ ನೇತೃತ್ವದ ವಿಭಾಗೀಯ ಪೀಠ ಅನುಮತಿ ನೀಡಿತು.

ಬಿಜೆಪಿ– ಎಡಪಕ್ಷಗಳ ಕಾರ್ಯಕರ್ತರ ಜಟಾಪಟಿ

  ಬಿಜೆಪಿ ರಚಿಸಿರುವ ನಾಲ್ವರು ಸದಸ್ಯರ ‘ಸತ್ಯಶೋಧನಾ ತಂಡ’ ಸೋಮವಾರ ದಕ್ಷಿಣ ಕೋಲ್ಕತ್ತದಲ್ಲಿರುವ ಕಾನೂನು ಕಾಲೇಜಿಗೆ ಭೇಟಿ ನೀಡಿತು. ಈ ವೇಳೆ ಬಿಜೆಪಿಯ ಯುವ ಘಟಕ ಬಿಜೆವೈಎಂ ಮತ್ತು ಎಡಪಕ್ಷಗಳ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕೇಂದ್ರದ ಮಾಜಿ ಸಚಿವರಾದ ಸತ್ಪಾಲ್‌ ಸಿಂಗ್ ಮೀನಾಕ್ಷಿ ಲೇಖಿ ಮತ್ತು ಸಂಸದರಾದ ವಿಪ್ಲವ್‌ ಕುಮಾರ್‌ ದೇವ್‌ ಹಾಗೂ ಮನನ್‌ ಕುಮಾರ್‌ ಮಿಶ್ರಾ ಅವರು ಸತ್ಯಶೋಧನಾ ತಂಡದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.