ADVERTISEMENT

ಪ್ರಶಾಂತ್‌ಭೂಷಣ್‌ ಪ್ರಕರಣದ ತೀರ್ಪು ಮರುಪರಿಶೀಲನೆ ಕೋರಿ ವಿದ್ಯಾರ್ಥಿಗಳಿಂದ ಪತ್ರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 15:33 IST
Last Updated 30 ಆಗಸ್ಟ್ 2020, 15:33 IST
ಪ್ರಶಾಂತ್ ಭೂಷಣ್  
ಪ್ರಶಾಂತ್ ಭೂಷಣ್     

ನವದೆಹಲಿ:ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಹಿರಿಯ ವಕೀಲ ಪ್ರಶಾಂತ್‌ ಭೂಷಣ್ ಅವರಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸುವುದನ್ನು ಮರುಪರಿಶೀಲನೆ ಮಾಡಬೇಕು ಎಂದು ಕಾನೂನು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ನ್ಯಾಯಮೂರ್ತಿಗಳ ವಿರುದ್ಧ ಕಟುವಾಗಿ ಟೀಕೆ ಮಾಡುವುದು ಅಪರಾಧವಲ್ಲ. ಅದು ಎಲ್ಲರ ಹಕ್ಕು ಎಂದು ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಈ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ಪ್ರಶಾಂತ್‌ಭೂಷಣ್ಅವರ ಶಿಕ್ಷೆಯ ಪ್ರಮಾಣವನ್ನು ಸುಪ್ರೀಂ ಕೋರ್ಟ್ಸೋಮವಾರ ಪ್ರಕಟಿಸಲಿದೆ.

ADVERTISEMENT

‘ನ್ಯಾಯಾಂಗವು ಜನರಲ್ಲಿ ತನ್ನ ಬಗ್ಗೆ ವಿಶ್ವಾಸ ಮೂಡುವ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ತನ್ನ ವಿರುದ್ಧ ಕೇಳಿ ಬರುವ ಟೀಕೆಗಳಿಗೆ ಉತ್ತರ ನೀಡಬೇಕು. ಬೇಗುದಿ ಮತ್ತು ನ್ಯಾಯ ಸಿಗಬೇಕು ಎಂಬ ಒತ್ತಾಸೆಯಿಂದ ವ್ಯಕ್ತಿ ಮಾಡುವ ಟೀಕೆಗಳನ್ನು ನ್ಯಾಯಾಂಗ ನಿಂದನೆ ಎಂಬುದಾಗಿ ಪರಿಗಣಿಸಬಾರದು’ ಎಂದೂ ವಿದ್ಯಾರ್ಥಿಗಳು ಪತ್ರದಲ್ಲಿ ವಿವರಿಸಿದ್ದಾರೆ.

‘ಪ್ರಶಾಂತ್ ಭೂಷಣ್‌ ಅವರು ಪಾರದರ್ಶಕತೆ, ಉತ್ತರದಾಯಿತ್ವ, ಪರಿಸರ ಸಂರಕ್ಷಣೆ, ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರದ ವಿರುದ್ಧ ಅನೇಕ ವರ್ಷಗಳ ಹೋರಾಟ ನಡೆಸಿದ್ದಾರೆ’ ಎಂದಿದ್ದಾರೆ.

‘ಅವರು ಮಾಡಿರುವ ಟ್ವೀಟ್‌ಗಳು ಸಮಾಜದಲ್ಲಿರುವ ಧ್ವನಿ ಇಲ್ಲದ ಹಾಗೂ ತುಳಿತಕ್ಕೆ ಒಳಗಾದವರನ್ನು ಪ್ರತಿನಿಧಿಸುತ್ತವೆ. ಅವು ನ್ಯಾಯಾಲಯದ ಪಾವಿತ್ರ್ಯಕ್ಕೆ ಧಕ್ಕೆ ತರುವುದೂ ಇಲ್ಲ’ ಎಂದೂ ವಿದ್ಯಾರ್ಥಿಗಳು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.