ADVERTISEMENT

ದೇಶದ್ರೋಹ ಕಾನೂನು ಇನ್ನಷ್ಟು ಕಠಿಣ: ರಾಜನಾಥ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 20:43 IST
Last Updated 12 ಏಪ್ರಿಲ್ 2019, 20:43 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ಗಾಂಧಿಧಾಮ್ (ಗುಜರಾತ್‌): ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ್ರೋಹ ಕಾನೂನನ್ನು ಇನ್ನಷ್ಟು ಕಠಿಣಗೊಳಿಸುವುದು’ ಎಂದು ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುತ್ತ, ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ದೇಶದ್ರೋಹ ಕಾನೂನನ್ನು ರದ್ದು ಮಾಡುವ ಭರವಸೆ ನೀಡಿರುವುದನ್ನು ಉಲ್ಲೇಖಿಸಿದ ಅವರು, ‘ದೇಶವನ್ನು ಒಡೆದು, ನಮ್ಮ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡಲು ಪ್ರಯತ್ನಿಸುವ ದೇಶದ್ರೋಹಿಗಳನ್ನು ನಾವು ಕ್ಷಮಿಸಬೇಕೇ’ ಎಂದು ಪ್ರಶ್ನಿಸಿದರು.

‘ಅಧಿಕಾರ ನಮ್ಮ ಕೈಯಲ್ಲಿದ್ದರೆ ಈ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಿ, ದೇಶದ್ರೋಹಿಗಳ ಬೆನ್ನುಹುರಿಯಲ್ಲಿ ನಡುಕ ಹುಟ್ಟುವಂತೆ ಮಾಡಲು ನಾವು ಹಿಂಜರಿಯುವುದಿಲ್ಲ’ ಎಂದರು.

ADVERTISEMENT

‘ಜಮ್ಮು– ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು’ ಎಂಬ ಹೇಳಿಕೆ ನೀಡಿರುವ ಒಮರ್‌ ಅಬ್ದುಲ್ಲಾ ಅವರನ್ನೂ ಟೀಕಿಸಿದ ಸಿಂಗ್‌, ‘ನೀವು ಇಂಥ ಬೇಡಿಕೆಗಳನ್ನು ಇಡುತ್ತ ಹೋದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ 370 ಹಾಗೂ 35ಎ ವಿಧಿಗಳನ್ನು ರದ್ದು ಮಾಡುವ ಹೊರತು ಬೇರೆ ದಾರಿಯೇ ಉಳಿಯುವುದಿಲ್ಲ. ಇಬ್ಬರು ಪ್ರಧಾನಿಗಳಿರುವ ಭಾರತವನ್ನು ನಾವು ಒಪ್ಪಿಕೊಳ್ಳಲಾರೆವು’ ಎಂದರು.

‘ಕಾಶ್ಮೀರ ಸಮಸ್ಯೆಯ ಸೃಷ್ಟಿಗೆ ನೆಹರೂ ಕಾರಣ’ ಎಂದ ಸಿಂಗ್‌, ‘ಈ ಸಮಸ್ಯೆ ಇತ್ಯರ್ಥಪಡಿಸುವ ಹೊಣೆಯನ್ನು ಸರ್ದಾರ್‌ ಪಟೇಲ್‌ ಅವರಿಗೆ ಕೊಟ್ಟಿದ್ದಿದ್ದರೆ ಸಮಸ್ಯೆ ಯಾವತ್ತೋ ಬಗೆಹರಿಯುತ್ತಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.