ADVERTISEMENT

ಲೇಹ್‌ ಗುಂಡಿನ ದಾಳಿ: ನ್ಯಾಯಾಂಗ ತನಿಖೆಗೆ ಆಗ್ರಹ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಒತ್ತಾಯ

ಪಿಟಿಐ
Published 30 ಸೆಪ್ಟೆಂಬರ್ 2025, 13:34 IST
Last Updated 30 ಸೆಪ್ಟೆಂಬರ್ 2025, 13:34 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಪಿಟಿಐ

ನವದೆಹಲಿ: ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ ಲಡಾಖ್‌ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು, ಪೊಲೀಸರ ಗುಂಡಿನ ದಾಳಿಯಲ್ಲಿ ನಾಲ್ವರು ಪ್ರತಿಭಟನಕಾರರು ಮೃತಪಟ್ಟಿರುವ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

‘ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಜನರನ್ನು ಹಿಂಸಿಸುವುದನ್ನು ಮತ್ತು ಬೆದರಿಸುವುದನ್ನು ಮೊದಲು ನಿಲ್ಲಿಸಿ. ಅದರ ಬದಲಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ’ ಎಂದು ಅವರು ಪ್ರಧಾನಿಯನ್ನು ಆಗ್ರಹಿಸಿದ್ದಾರೆ. 

ADVERTISEMENT

ಲಡಾಖ್‌ನಲ್ಲಿ ನಡೆದ ಈ ಹತ್ಯೆಗಳ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಯೋಧ, ಮಾಜಿ ಸೈನಿಕ ತ್ಸೆವಾಂಗ್ ಥಾರ್ಚಿನ್ ಅವರೂ ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದರು. ದಕ್ಷಿಣ ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಅವರು, ಮಾಜಿ ಸೈನಿಕ ತ್ಸೆವಾಂಗ್ ಥಾರ್ಚಿನ್ ಅವರ ತಂದೆಯ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. 

‘ತಂದೆ ಮತ್ತು ಮಗ ಇಬ್ಬರೂ ಸೈನ್ಯದಲ್ಲಿ ಕೆಲಸ ಮಾಡಿದವರು. ದೇಶಭಕ್ತಿ ಅವರ ರಕ್ತದಲ್ಲಿಯೇ ಇದೆ. ಆದರೆ ಬಿಜೆಪಿ ಸರ್ಕಾರ ದೇಶದ ದೈರ್ಯಶಾಲಿ ಪುತ್ರನನ್ನು ಗುಂಡಿಕ್ಕಿ ಕೊಂದಿದೆ’ ಎಂದು ಅವರು ಹೇಳಿದ್ದಾರೆ. 

‘ಥಾರ್ಚಿನ್‌ ಅವರ ತಂದೆಯ ನೋವು ತುಂಬಿದ ಕಣ್ಣುಗಳು ಕೆಲ ಪ್ರಶ್ನೆಗಳನ್ನು ಕೇಳುತ್ತಿವೆ. ಅದರಲ್ಲಿ ಪ್ರಮುಖವಾದದ್ದು, ದೇಶಕ್ಕಾಗಿ ಸೇವೆ ಸಲ್ಲಿಸಿದ್ದಕ್ಕೆ ದೊರೆತ ಪ್ರತಿಫಲವೇ ಎಂಬುದಾಗಿದೆ’ ಎಂದಿದ್ದಾರೆ. 

‘ಲಡಾಖ್‌ ದುಃಖ, ದೇಶದ ದುಃಖ’– ಖರ್ಗೆ: ಈ ಕುರಿತು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಲಡಾಖ್‌ನ ದುಃಖ, ಇಡೀ ದೇಶದ ದುಃಖವಾಗಿದೆ’ ಎಂದಿದ್ದಾರೆ. 

‘ನಮ್ಮ 20 ವೀರ ಯೋಧರು ಲಡಾಖ್‌ನ ಗಲ್ವಾನ್‌ ಬಳಿಯ ಎಲ್‌ಎಸಿಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದರು. ಆಗ ಮೋದಿ ಚೀನಾಕ್ಕೆ ಕ್ಲೀನ್‌ ಚೀಟ್ ನೀಡಿದ್ದರು! ಆಗ ಅವರು ನಮ್ಮ ಈ ವೀರ ಯೋಧರ ಶೌರ್ಯವನ್ನು ನೆನಪಿಸಿಕೊಳ್ಳಬೇಕಿತ್ತು. ಈಗ ಅವರಿಗೆ ಯಾವ ಅವಕಾಶವಿದೆ? ಚೀನಾಗೆ ಕ್ಲೀನ್‌ ಚೀಟ್‌ ನೀಡಿದವರು, ಹುತಾತ್ಮರಾದ ನಮ್ಮ ತ್ಸೆವಾಂಗ್‌ ಥಾರ್ಚಿನ್‌ನಂತಹ ವೀರ ಯೋಧರಿಗೆ ಯಾವ ಗೌರವ ಸಲ್ಲಿಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ. ‘ಇದು ಬಿಜೆಪಿಯ ಟೊಳ್ಳು ರಾಷ್ಟ್ರೀಯತೆಯಲ್ಲವೇ’ ಎಂದು ಖರ್ಗೆ ಟೀಕಿಸಿದ್ದಾರೆ. 

ಬಂಧಿತರ ಬಿಡುಗಡೆಯಾಗದೆ ಮಾತುಕತೆಯಿಲ್ಲ: ಕೆಡಿಎ ನವದೆಹಲಿ (ಪಿಟಿಐ): ಪರಿಸರ ಹೋರಾಟಗಾರ ಸೊನಮ್ ವಾಂಗ್ಚೂಕ್ ಮತ್ತು ಇತರ ಬಂಧಿತರನ್ನು ಬಿಡುಗಡೆ ಮಾಡದ ಹೊರತು ಕೇಂದ್ರ ಸರ್ಕಾರದ ಜತೆಗೆ ಯಾವುದೇ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾರ್ಗಿಲ್‌ ಪ್ರಜಾಸತ್ತಾತ್ಮಕ ಒಕ್ಕೂಟ (ಕೆಡಿಎ) ಸ್ಪಷ್ಟಪಡಿಸಿದೆ. ಅಲ್ಲದೆ ಸೆ 24ರಂದು ಹೋರಾಟಗಾರರ ಮೇಲೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಡಿಎ ಸಹ ಅಧ್ಯಕ್ಷ ಅಸ್ಗರ್‌ ಅಲಿ ಕರ್ಬಾಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಲೇಹ್‌: ಏಳು ಗಂಟೆ ಕರ್ಪ್ಯೂ ಸಡಿಲಿಕೆ

ಹಿಂಸಾಚಾರ ಪೀಡಿತ ಲಡಾಖ್‌ನ ಲೇಹ್‌ ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಏಳು ಗಂಟೆಗಳ ಕಾಲ ಕರ್ಫ್ಯೂ ಸಡಿಸಲಾಗಿತ್ತು. ವಾರಪೂರ್ತಿ ನಿರ್ಬಂಧಗಳಲ್ಲಿ ಸಿಲುಕಿದ್ದ ಜನರಿಗೆ ಮಾರುಕಟ್ಟೆಗಳಿಗೆ ತೆರಳಲು ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಕರ್ಪ್ಯೂ ಸಡಿಲಿಕೆ ನೆರವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.