ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ ಗಬ್ಬಾರ್ಡ್
ತುಳಸಿ ಗಬ್ಬಾರ್ಡ್ ಎಕ್ಸ್ ಖಾತೆಯ ಚಿತ್ರ
ನವದೆಹಲಿ: ಹಿಂದೂ ಅಮೇರಿಕನ್, ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ ಗಬ್ಬಾರ್ಡ್, ತಾನೊಬ್ಬಳು ಶ್ರೀಕೃಷ್ಣನ ಕಟ್ಟಾ ಭಕ್ತೆ ಎಂದು ಹೇಳಿಕೊಂಡಿದ್ದಾರೆ.
ಭಗವದ್ಗೀತೆಯಲ್ಲಿನ ಕೃಷ್ಣನ ಬೋಧನೆಗಳು ಕಷ್ಟ ಮತ್ತು ಒಳ್ಳೆಯ ಸಮಯಗಳಲ್ಲಿ ನನಗೆ ನೆರವಿಗೆ ಬರುತ್ತವೆ ಎಂದಿದ್ದಾರೆ.
ಅರ್ಜುನನಿಗೆ ಕೃಷ್ಣನು ಮಾಡಿರುವ ಬೋಧನೆ ದಿನವಿಡೀ ಶಕ್ತಿ, ಶಾಂತಿ ಮತ್ತು ಸಾಂತ್ವನವನ್ನು ನೀಡುತ್ತವೆ ಎಂದು ಪ್ರಸ್ತುತ ಭಾರತಕ್ಕೆ ಭೇಟಿ ನೀಡಿರುವ 44 ವರ್ಷದ ಅಮೆರಿಕದ ಉನ್ನತಾಧಿಕಾರಿ ಹೇಳಿದ್ದಾರೆ.
ಸೋಮವಾರ ಎಎನ್‌ಐಗೆ ನೀಡಿರುವ ಸಂದರ್ಶನದಲ್ಲಿ, ಮಾತನಾಡಿರುವ ಅವರು, ದೇವರ ಮೇಲಿನ ಭಕ್ತಿಯು ಹೇಗೆ ತನ್ನ ಜೀವನದ ಕೇಂದ್ರಬಿಂದುವಾಗಿದೆ ಎಂಬುದನ್ನು ವಿವರಿಸಿದ್ದಾರೆ. ಸಾಲು ಸಾಲು ಸಭೆಗಳ ನಡುವೆ ಬಿಡುವು ಮಾಡಿಕೊಂಡು ತಮ್ಮ ಆಧ್ಯಾತ್ಮಿಕ ವಿಚಾರವನ್ನು ಹಂಚಿಕೊಂಡಿದ್ದಾರೆ.
ತಮ್ಮ ಆಧ್ಯಾತ್ಮಿಕ ಪ್ರಯಾಣ ಮತ್ತು ಹಿಂದೂ ಆಗಿರುವುದು ಎಲ್ಲ ಅಡೆತಡೆಗಳನ್ನು ಮೀರಲು ಹೇಗೆ ಸಹಾಯ ಮಾಡಿದೆ ಎಂಬುದರ ಕುರಿತು ಗಬ್ಬಾರ್ಡ್ ವಿವರಿಸಿದ್ದಾರೆ.
‘ನನ್ನ ವೈಯಕ್ತಿಕ ಆಧ್ಯಾತ್ಮಿಕ ಅಭ್ಯಾಸ, ದೇವರೊಂದಿಗಿನ ನನ್ನ ಸಂಬಂಧವು ನನ್ನ ಜೀವನದ ಕೇಂದ್ರಬಿಂದುವಾಗಿದೆ. ಭಗವದ್ಗೀತೆಯಲ್ಲಿ ಹೇಳಿರುವಂತೆ ದೇವರಿಗೆ ಇಷ್ಟವಾಗುವ ಜೀವನವನ್ನು ನಡೆಸಲು ನಾನು ಪ್ರತಿದಿನ ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಅದನ್ನು ಮಾಡಲು ಉತ್ತಮ ಮಾರ್ಗ ಯಾವುದು ಎಂಬುದನ್ನು ಹುಡುಕುತ್ತಿರುತ್ತೇನೆ ಮತ್ತು ದೇವರ ಎಲ್ಲ ಮಕ್ಕಳಿಗೆ ಸೇವೆ ಸಲ್ಲಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನನ್ನ ವೃತ್ತಿ ಜೀವನದ ವಿವಿಧ ಸಮಯಗಳಲ್ಲಿ, ಪ್ರಪಂಚದ ವಿವಿಧ ಭಾಗಗಳಲ್ಲಿನ ಯುದ್ಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಥವಾ ನಾವು ಈಗ ಎದುರಿಸುತ್ತಿರುವ ಸವಾಲುಗಳನ್ನು ನಿರ್ವಹಿಸಲು ಭಗವದ್ಗೀತೆಯಲ್ಲಿ ಅರ್ಜುನನಿಗೆ ಕೃಷ್ಣನು ನೀಡಿದ ಬೋಧನೆಗಳನ್ನು ಆಶ್ರಯಿಸುತ್ತಿದ್ದೇನೆ. ಕೃಷ್ಣ ಅರ್ಜುನನಿಗೆ ಮಾಡಿದ ಬೋಧನೆಗಳ ನಿರ್ಣಾಯಕ ಪಾಠಗಳನ್ನು ನಿರಂತರವಾಗಿ ಕಲಿಯುತ್ತಿದ್ದೇನೆ. ಅದು ಎಲ್ಲ ದಿನಗಳಲ್ಲಿ ನನಗೆ ಶಕ್ತಿ, ಶಾಂತಿ ಮತ್ತು ಹೆಚ್ಚಿನ ಸಾಂತ್ವನವನ್ನು ನೀಡುತ್ತದೆ’ ಎಂದಿದ್ದಾರೆ.
ಭಾರತಕ್ಕೆ ಭೇಟಿ ಮತ್ತು ಭಾರತೀಯ ತಿನಿಸುಗಳ ಬಗ್ಗೆ ತಮ್ಮ ಪ್ರೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.
ನನಗೆ ಭಾರತದ ಬಗ್ಗೆ ತುಂಬಾ ಪ್ರೀತಿ ಇದೆ ಅಂತ ಹೇಳಲೇಬೇಕು. ನಾನು ಇಲ್ಲಿ ಇರುವಾಗ ನನಗೆ ಯಾವಾಗಲೂ ಮನೆಯಲ್ಲಿರುವಂತೆ ಭಾಸವಾಗುತ್ತದೆ. ಇಲ್ಲಿನ ಜನರು ಆತ್ಮೀಯತೆಯಿಂದ ಸ್ವಾಗತಿಸುತ್ತಾರೆ. ಭಾರತದ ಆಹಾರವು ಯಾವಾಗಲೂ ರುಚಿಕರವಾಗಿರುತ್ತದೆ. ದಾಲ್ ಮಖನಿ ಮತ್ತು ತಾಜಾ ಪನೀರ್ ಹೊಂದಿರುವ ಯಾವುದೇ ಖಾದ್ಯ ಸ್ವಾದಿಷ್ಟವಾಗಿರುತ್ತದೆ ಎಂದಿದ್ದಾರೆ.
ಅಮೆರಿಕದ ಆರ್ಮಿ ರಿಸರ್ವ್‌ನಲ್ಲಿ ಅನುಕರಣೀಯ ಸೇವೆಗೆ ಹೆಸರುವಾಸಿಯಾದ ಗಬ್ಬಾರ್ಡ್, ಎರಡು ದಶಕಗಳಿಗೂ ಹೆಚ್ಚು ಕಾಲ ವಿಶಿಷ್ಟ ವೃತ್ತಿಜೀವನವನ್ನು ಹೊಂದಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಏರಿದ ಅವರು, ತಮ್ಮ ನಾಯಕತ್ವ, ಸಮರ್ಪಣೆ ಮತ್ತು ಕಾರ್ಯತಂತ್ರದ ಕುಶಾಗ್ರಮತಿಯಿಂದ ಗುರುತಿಸಲ್ಪಟ್ಟಿದ್ದಾರೆ.
ತಮ್ಮ ಬಹುರಾಷ್ಟ್ರಗಳ ಭೇಟಿಯ ಭಾಗವಾಗಿ ವರು ಭಾರತಕ್ಕೆ ಆಗಮಿಸಿದ್ದಾರೆ. ಅಮೆರಿಕ ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದೆ. ಗಬ್ಬಾರ್ಡ್ ಅವರ ಪ್ರವಾಸದ ಏಷ್ಯಾ ಹಂತವು ಮಾರ್ಚ್ 18ರಂದು ಮುಕ್ತಾಯಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.