ADVERTISEMENT

ಸಿಎಂ ಬದಲಾವಣೆ: ಸುಪ್ರೀಂ ತೀರ್ಪಿನ ಬಳಿಕ ಪ್ರತಿಕ್ರಿಯೆ; ಶರದ್‌ ಪವಾರ್‌

ಪಿಟಿಐ
Published 26 ಏಪ್ರಿಲ್ 2023, 14:13 IST
Last Updated 26 ಏಪ್ರಿಲ್ 2023, 14:13 IST
ಶರದ್‌ ಪವಾರ್
ಶರದ್‌ ಪವಾರ್   

ಮುಂಬೈ: ಶಿವಸೇನಾ (ಶಿಂದೆ ಬಣ) ಹಾಗೂ ಬಿಜೆಪಿ ಮೈತ್ರಿಕೂಟ ಸರ್ಕಾರ ಅಧಿಕಾರದ ಗದ್ದುಗೆ ಏರಿ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ನಾಯಕತ್ವದ ಬದಲಾವಣೆಯ ಕೂಗು ಕೇಳಿಬಂದಿದ್ದು, ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಪಲ್ಲಟ ಶುರುವಾಗಲಿದೆಯೇ ಎಂಬ ಮಾತು ಮುನ್ನಲೆಗೆ ಬಂದಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಶಿವಸೇನಾ ಪಕ್ಷದ ಮುಖವಾಣಿ ‘ಸಾಮ್ನಾ’ ಪತ್ರಿಕೆಯು ‘ಮುಖ್ಯಮಂತ್ರಿ ಬದಲಾಗಲಿದ್ದಾರೆ’ ಎಂದು ಸಂಪಾದಕೀಯ ಬರೆದಿತ್ತು. ಇದರ ಬೆನ್ನಲ್ಲೇ ‘ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹಗ್ಗಜಗ್ಗಾಟದ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಹೊರಬಿದ್ದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನೀಡಿರುವ ಹೇಳಿಕೆ ರಾಜಕೀಯ ಮಹತ್ವ ಪಡೆದುಕೊಂಡಿದೆ. 

ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಇತರ 15 ಶಾಸಕರ ಅನರ್ಹತೆ ಪ್ರಕರಣವು ವಿಚಾರಣೆ ಹಂತದಲ್ಲಿದೆ. ಈ ನಡುವೆಯೇ  ಮುಖ್ಯಮಂತ್ರಿ ಹುದ್ದೆಯಿಂದ ಶಿಂದೆ ಕೆಳಗಿಳಿಯಲಿದ್ದು, ದೇವೇಂದ್ರ ಫಡಣವೀಸ್‌ ಸಿ.ಎಂ ಗಾದಿಗೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. 

ADVERTISEMENT

ಸದ್ಯ ಶಿಂದೆ ಅವರು, ಸತಾರ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದು, ಬಳಿಕ ಮಾರಿಷಸ್‌ಗೆ ತೆರಳಲಿದ್ದಾರೆ.

ಊಹಾಪೋಹಗಳ ನಡುವೆಯೇ ವಿರೋಧ ಪಕ್ಷದ ನಾಯಕ ಅಜಿತ್‌ ಪವಾರ್‌ ಅವರೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂಬ ಪೋಸ್ಟರ್‌ಗಳು ಮುಂಬೈ, ನೇವಿ ಮುಂಬೈ, ನಾಸಿಕ್‌, ನಾಗಪುರ ಹಾಗೂ ಒಸ್ಮಾನಬಾದ್‌ನಲ್ಲಿ ರಾರಾಜಿಸುತ್ತಿವೆ. ಈ ಬಗೆಗಿನ ವದಂತಿಗೆ ತೆರೆ ಎಳೆದಿರುವ ಶರದ್ ಪವಾರ್‌, ‘ನನ್ನ ಬೆಂಬಲಿಗರು ಈ ಪೋಸ್ಟರ್‌ ಅಳವಡಿಸಿದ್ದಾರೆ. ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುವುದು ಮೂರ್ಖತನವೆಂದು ಅಜಿತ್‌ ಪವಾರ್‌ ಅವರೇ ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್‌ ಅಘಾಡಿ ಅಧಿಕಾರಕ್ಕೆ ಬಂದರೆ ಎನ್‌ಸಿಪಿಗೆ ಮುಖ್ಯಮಂತ್ರಿ ಹುದ್ದೆ ಒಲಿಯಲಿದೆ ಎಂದು ಉದ್ಧವ್‌ ಠಾಕ್ರೆ ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಸಂಜಯ್‌ ರಾವುತ್‌ ಹೇಳಿದ್ದಾರೆ ಎಂದರೆ ಅವರು ಪತ್ರಕರ್ತ ಇರಬೇಕು. ನಮಗಿಂತಲೂ ನಿಮಗೆ( ಮಾಧ್ಯಮಗಳು) ಹೆಚ್ಚು ಗೊತ್ತಿದೆ. ಈ ಬಗ್ಗೆ ನನಗೇನು ತಿಳಿದಿಲ್ಲ’ ಎಂದು ಹೇಳಿದ್ದಾರೆ.

ಈ ಬಗ್ಗೆ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಾನಾ ಪಠೋಲೆ, ‘ಅತಿಹೆಚ್ಚಿನ ಸ್ಥಾನ ಪಡೆಯುವ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆ ಲಭಿಸಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ನಾನು ರಜೆ ಮೇಲೆ ತೆರಳಿಲ್ಲ: ಶಿಂದೆ

ಮುಂಬೈ(ಪಿಟಿಐ): ನಾಯಕತ್ವ ಬದಲಾವಣೆಯ ವದಂತಿ ಬೆನ್ನಲ್ಲೇ ಮುಖ್ಯಮಂತ್ರಿ ಏಕನಾಥ ಶಿಂದೆ ಬುಧವಾರ ವಿಡಿಯೊ ಸಂವಾದ ನಡೆಸಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 65 ಕಡತಗಳನ್ನು ವಿಲೇವಾರಿ ಮಾಡಿದರು.

ಕಡತಗಳ ವಿಲೇವಾರಿಯ ಜೊತೆಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನೂ ನೀಡಿದರು. ಅಕಾಲಿಕ ಮಳೆಯಿಂದ ತೊಂದರೆಗೆ ಸಿಲುಕಿರುವ ರೈತರಿಗೆ ಅಗತ್ಯ ನೆರವನ್ನು ಮುಂದುವರಿಸಬೇಕು ಎಂದು ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸತಾರ ಜಿಲ್ಲೆಯಾದ್ಯಂತ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ್ದೇನೆ. ಅಧಿಕಾರಿಗಳ ಸಭೆ ನಡೆಸಿದ್ದೇನೆ. ಜನರನ್ನೂ ಭೇಟಿ ಮಾಡಿದ್ದೇನೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ರಜೆ ಮೇಲೆ ತೆರಳಿದ್ದಾರೆ ಎಂಬ ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಮುಖಂಡರ ಹೇಳಿಕೆ ಸತ್ಯಕ್ಕೆ ದೂರವಾದುದು. ನಾನು ಎಲ್ಲಿಗೂ ಹೋಗಿಲ್ಲ. ಪ್ರವಾಸಿ ತಾಣವಾದ ಮಹಾಬಲೇಶ್ವರ ಪ್ರದೇಶದಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದೇನೆ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.