ADVERTISEMENT

ಉತ್ತರದಲ್ಲಿ ಸಿಡಿಲಾಘಾತ: 50 ಸಾವು

ಜೈಪುರ: ‘ಸೆಲ್ಫಿ’ ತೆಗೆದುಕೊಳ್ಳುವಾಗ ಸಿಡಿಲು ಬಡಿದು ದುರ್ಘಟನೆ

ಏಜೆನ್ಸೀಸ್
Published 12 ಜುಲೈ 2021, 20:35 IST
Last Updated 12 ಜುಲೈ 2021, 20:35 IST
ಜೈಪುರದ ಆಮೆರ್ ಕೋಟೆಯ ವೀಕ್ಷಣಾ ಗೋಪುರದ ಮೇಲೆ ಸಿಡಿಲಿನ ಹೊಡೆತಕ್ಕೆ ಕೆಳಕ್ಕೆ ಬಿದ್ದ ಪ್ರವಾಸಿಗರಿಗಾಗಿ ಎಸ್‌ಡಿಆರ್‌ಎಫ್ ತಂಡ ಪರಿಶೀಲನೆ ನಡೆಸಿತು–ಪಿಟಿಐ ಚಿತ್ರ
ಜೈಪುರದ ಆಮೆರ್ ಕೋಟೆಯ ವೀಕ್ಷಣಾ ಗೋಪುರದ ಮೇಲೆ ಸಿಡಿಲಿನ ಹೊಡೆತಕ್ಕೆ ಕೆಳಕ್ಕೆ ಬಿದ್ದ ಪ್ರವಾಸಿಗರಿಗಾಗಿ ಎಸ್‌ಡಿಆರ್‌ಎಫ್ ತಂಡ ಪರಿಶೀಲನೆ ನಡೆಸಿತು–ಪಿಟಿಐ ಚಿತ್ರ   

ನವದೆಹಲಿ: ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು ಸುಮಾರು 50 ಜನರು ಮೃತಪಟ್ಟಿದ್ದಾರೆ. ಈ ರಾಜ್ಯಗಳಲ್ಲಿ ಹತ್ತಾರು ಜನರು ಸಿಡಿಲಿನ ಹೊಡೆತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜೈಪುರದಲ್ಲಿ 12 ಮಂದಿ ಸೇರಿದಂತೆ ರಾಜಸ್ಥಾನ ರಾಜ್ಯದಾದ್ಯಂತ 23 ಜನರು ಸಿಡಿಲಿನಿಂದ ಮೃತಪಟ್ಟಿದ್ದಾರೆ. 12ನೇ ಶತಮಾನದ ಆಮೆರ್ ಕೋಟೆಯಲ್ಲಿ ಎರಡು ವೀಕ್ಷಣಾ ಗೋಪುರಗಳಲ್ಲಿ ಪ್ರವಾಸಿಗರು ಸೇರಿದ್ದಾಗ ಸಿಡಿಲು ಅಪ್ಪಳಿಸಿದೆ.

ಪ್ರವಾಸಿಗರು ವೀಕ್ಷಣಾ ಗೋಪುರದ ಮೇಲೆ ‘ಸೆಲ್ಫಿ’ ತೆಗೆದುಕೊಳ್ಳುವಾಗ ಸಿಡಿಲು ಬಡಿದು, ಗೋಪುರದ ಮೇಲಿಂದ ನೆಲಕ್ಕೆ ಅಪ್ಪಳಿಸಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ.

ADVERTISEMENT

‘ಗಾಯಗೊಂಡವರಲ್ಲಿ ಕೆಲವರು ಸಿಡಿಲಿನ ಹೊಡೆತ ತಾಳದೆ ಪ್ರಜ್ಞಾಹೀನರಾಗಿದ್ದರು. ಇತರರು ಭಯಭೀತರಾಗಿ ಮತ್ತು ತೀವ್ರ ನೋವಿನಿಂದ ಓಡಿ
ಹೋದರು’ ಎಂದು ಪೊಲೀಸ್ ಅಧಿಕಾರಿ ತಿವಾರಿ ಹೇಳಿದ್ದಾರೆ. ವೀಕ್ಷಣಾ ಗೋಪುರದ ಬಳಿಯಿರುವ ಆಳದ ಕಂದಕದಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಅಧಿಕಾರಿಗಳು ಸೋಮವಾರ ಪರಿಶೀಲನೆ ನಡೆಸಿದರು.

ಕೋಟ, ಝಾಲ್ವಾರ್, ಬಾರನ್, ಧೋಲ್‌ಪುರ, ಸವಾಯಿ, ಮಧೋಪುರ ಮತ್ತು ಟೊಂಕ್‌ ಜಿಲ್ಲೆಗಳಲ್ಲಿ ಜನರು ಮೃತಪಟ್ಟಿದ್ದಾರೆ. ರಾಜ್ಯದಾದ್ಯಂತ ಸುಮಾರು 27 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 16 ಜಾನುವಾರುಗಳೂ ಅಸುನೀಗಿವೆ.

ಮೃತರ ಅವಲಂಬಿತರಿಗೆ ನೆರವು ಮತ್ತು ಗಾಯಾಳು
ಗಳ ಚಿಕಿತ್ಸೆಗಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರವು ₹1.65 ಕೋಟಿ ಬಿಡುಗಡೆ ಮಾಡಿದೆ ಎಂದು ವಿಪತ್ತು ನಿರ್ವಹಣೆ ಮತ್ತು ಪರಿಹಾರ ವಿಭಾಗದ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಹೇಳಿದರು.

ಮಧ್ಯಪ್ರದೇಶದಲ್ಲಿಇಬ್ಬರು ಬಾಲಕರು ಸೇರಿದಂತೆ 6 ಮಂದಿ ಬಲಿಯಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ 11 ಜನರು ಗಾಯಗೊಂಡಿದ್ದಾರೆ. ಭಾನುವಾರ ಸಂಜೆ ಗ್ವಾಲಿಯರ್ ಜಿಲ್ಲೆಯ ಸುನಾರ್ಪುರದಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಶಿವಪುರ ಜಿಲ್ಲೆಯ ತಪ್ರಿಯನ್ ಗ್ರಾಮದಲ್ಲಿ ತಂದೆ ಮತ್ತು ಮಗನಿಗೆ ಗಂಭೀರವಾದ ಸುಟ್ಟಗಾಯಗಳಾಗಿವೆ. ಬರೋಡಿ, ನರಹಿ, ಸಲೈಸ ಗ್ರಾಮಗಳಲ್ಲೂ ಸಿಡಿಲಿನ ಆಘಾತಕ್ಕೆ ಜನರು ಗಾಯಗೊಂಡಿದ್ದಾರೆ. ಕೆಲವು ಕುರಿಗಳೂ ಬಲಿಯಾಗಿವೆ.

ಉತ್ತರ ಪ್ರದೇಶ: ಫತೇಪುರ, ಕೌಸಾಂಬಿ, ಫಿರೋಜಾಬಾದ್‌ ಜಿಲ್ಲೆಗಳಲ್ಲಿ 12ಕ್ಕೂ ಹೆಚ್ಚು ಜನರು ಸಿಡಿಲಿನ ಆಘಾತಕ್ಕೆ ಬಲಿಯಾಗಿದ್ದಾರೆ. ಕಲ್ಯಾಣಪುರ ಪ್ರದೇಶದ ಗುಮದಾಪುರದಲ್ಲಿ ಇಬ್ಬರು ಸಹೋದರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.