ಪಟ್ನಾ: ಬಿಹಾರದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಪಾನ (ಮದ್ಯ) ನಿಷೇಧ ವಾಪಸ್ ಪಡೆಯುವ ನಿರ್ಧಾರವನ್ನು ಮೊದಲು ಮಾಡುವುದಾಗಿ ಪ್ರಶಾಂತ್ ಕಿಶೋರ್ ನೇತೃತ್ವದ ನೂತನ ಪಕ್ಷ ಜನ ಸುರಾಜ್ ಪಾರ್ಟಿ ಘೋಷಣೆ ಮಾಡಿದೆ.
ಮಾಜಿ ಸಂಸದ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘2016ರಲ್ಲಿ ನಿತೀಶ್ ಕುಮಾರ್ ಅವರು ಕೈಗೊಂಡ ಮದ್ಯ ನಿಷೇಧದ ತಪ್ಪು ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕವಾಗಿ ₹28,000 ಕೋಟಿ ನಷ್ಟವಾಗುತ್ತಿದೆ. ನಾವು ಮದ್ಯ ಮಾರಾಟದಿಂದ ಬರುವ ಆದಾಯವನ್ನು ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡಲು ಬಳಸುತ್ತೇವೆ’ ಎಂದರು.
ಪ್ರಶಾಂತ್ ವಿರುದ್ಧ ಎಫ್‌ಐಆರ್:
ಈ ಮಧ್ಯೆ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಎಫ್‌ಐಆರ್ ದಾಖಲಾಗಿದೆ. ಅನುಮತಿಸಿದ್ದಕ್ಕಿಂತ ಹೆಚ್ಚು ಸುದ್ದಿಗೋಷ್ಠಿ ನಡೆಸಿದ್ದು, ರಾಘೋಪುರದಲ್ಲಿ ಚುನಾವಣಾ ನಿಯಮ ಪಾಲಿಸದ ಆರೋಪ ಹೊರಿಸಲಾಗಿದೆ.
ಆರ್‌ಜೆಡಿಯ ತೇಜಸ್ವಿ ಯಾದವ್ ಪ್ರತಿನಿಧಿಸುವ ರಾಘೋಪುರ ಕ್ಷೇತ್ರದಲ್ಲಿ ಪ್ರಶಾಂತ್ ಕಿಶೋರ್ ಪ್ರಚಾರ ನಡೆಸುತ್ತಿದ್ದು, ಸ್ಥಳೀಯರ ಜೊತೆ ಪ್ರಬಲ ಅಭ್ಯರ್ಥಿ ಬಗ್ಗೆ ಚರ್ಚಿಸುತ್ತಿದ್ದಾರೆ. ಈಗಾಗಲೇ ಜನ ಸುರಾಜ್ ಪಕ್ಷ 51 ಅಭ್ಯರ್ಥಿಗಳನ್ನು ಘೋಷಿಸಿದ್ದು, ಮೊದಲ ಪಟ್ಟಿಯಲ್ಲಿ ಪ್ರಶಾಂತ್ ಕಿಶೋರ್ ಹೆಸರಿಲ್ಲ. ಸೋಮವಾರ ಎರಡನೇ ಪಟ್ಟಿ ಘೋಷಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.