ADVERTISEMENT

ವಿಮಾನ, ಹೆಲಿಕಾಪ್ಟರ್ ಅಪಘಾತಗಳಲ್ಲಿ ಬದುಕುಳಿದ ಲಕ್ಕಿ ರಾಜಕಾರಣಿಗಳ ಪಟ್ಟಿ ಇಂತಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2026, 7:43 IST
Last Updated 28 ಜನವರಿ 2026, 7:43 IST
   

ಮುಂಬೈ: ವಿಮಾನ ಅಥವಾ ಹೆಲಿಕಾಪ್ಟರ್ ಅವಘಡಗಳು ಸಂಭವಿಸಿದರೆ ಬದುಕುಳಿಯುವುದು ಭಾರಿ ಕಷ್ಟ. ಏಕೆಂದರೆ, ಭಾರಿ ಸ್ಫೋಟ ಮತ್ತು ಬೆಂಕಿಯ ಕೆನ್ನಾಲಿಗೆ ಆವರಿಸುವುದರಿಂದ ಬದುಕುಳಿಯುವ ಅವಕಾಶ ಬಹಳ ಕಡಿಮೆ ಇರುತ್ತದೆ. ಅಂತಹ ಸಂದರ್ಭದಲ್ಲೂ ಸಾವಿನ ದವಡೆಯಿಂದ ಪಾರಾದ ಕೆಲ ರಾಜಕಾರಣಿಗಳು ಮತ್ತು ಗಣ್ಯರು ಇದ್ದಾರೆ.

ವಿಮಾನ ಅಪಘಾತ ಸಂಭವಿಸಿಯೂ ಅದೃಷ್ಟವಶಾತ್ ಕೆಲ ರಾಜಕಾರಣಿಗಳು ಬದುಕುಳಿದಿದ್ದಾರೆ. ಆ ಪೈಕಿ ದಿವಂಗತ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಒಬ್ಬರು. 1977ರಲ್ಲಿ ಅಸ್ಸಾಂನಲ್ಲಿ ವಿಶೇಷ ವಿಮಾನ ಪತನಗೊಂಡರೂ ಮೊರಾರ್ಜಿ ದೇಸಾಯಿ ಪ್ರಾಣಾಪಾಯದಿಂದ ಪಾರಾಗಿದ್ದರು.

2004ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ವಿಮಾನ ಅವಘಡದಲ್ಲೂ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, ಅಂದಿನ ಕೇಂದ್ರ ಸಚಿವ ಪೃಥ್ವಿರಾಜ್ ಚವಾಣ್ ಮತ್ತು ಕುಮಾರಿ ಸೆಲ್ಜಾ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು.

ADVERTISEMENT

10 ವರ್ಷಗಳ ಹಿಂದೆ ಟೇಕಾಫ್ ಆದ ಕೆಲವೇ ಸಮಯದಲ್ಲಿ ಹೆಲಿಕಾಪ್ಟರ್ ಎಲೆಕ್ಟ್ರಿಕ್ ವೈರ್‌ ಸ್ಪರ್ಶಿಸಿ ಸಂಭವಿಸಿದ ಅಪಘಾತದಲ್ಲಿ ಅಂದಿನ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ಸಚಿವ ಪ್ರತಾಪ್ ಸಿಂಗ್ ಬಜ್ವಾ ಪಾರಾಗಿದ್ದರು.

ಆಗಸ್ಟ್ 30ರಂದು ಫಿರೋಜ್‌ಪುರದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದಲ್ಲಿ ಪಂಜಾಬ್‌ನ ಉಪ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಬಾದಲ್ ಯಾವುದೇ ಗಾಯವಿಲ್ಲದೆ ಪಾರಾಗಿದ್ದರು.

ಕಳೆದ ವರ್ಷ ಕೇಂದ್ರ ಗೃಹ ಸಚಿವ ರಾಜನಾಥ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ರಾಮಪುರದಿಂದ ಉತ್ತರಪ್ರದೇಶಕ್ಕೆ ಪ್ರಯಾಣಿಸುತ್ತಿದ್ಧಾಗ ಸಂಭವಿಸಿದ ವಿಮಾನ ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

2001ರಲ್ಲಿ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನಗೊಂಡು ಅಂದಿನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಎರಡು ಮೂರು ಬಾರಿ ವಿಮಾನ ಅವಘಡಗಳಲ್ಲಿ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.