ADVERTISEMENT

ಸರ್ಕಾರದ ಕೆಲವು ಸ್ನೇಹಿತರಿಗೆ ಭರಪೂರ ಸಾಲ: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 14:30 IST
Last Updated 25 ಆಗಸ್ಟ್ 2022, 14:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಸರ್ಕಾರದ ಕೆಲವು ಸ್ನೇಹಿತರಿಗೆ’ ಭರಪೂರಸಾಲದ ಕೊಡುಗೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್‌ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತ ಉದ್ಯಮಿಗಳನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು, ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದೆ.

ಅದಾನಿ ಸಮೂಹದ ಕಂಪನಿಗಳು ಪಡೆದಿರುವ ಒಟ್ಟಾರೆ ಸಾಲಸುಮಾರು ₹2.30 ಲಕ್ಷ ಕೋಟಿಯಷ್ಟಿದೆ. ಅದಾನಿ ಸಮೂಹದ ಋಣಭಾರದ ಬಗ್ಗೆ ವಿಶ್ಲೇಷಣೆ ನಡೆಸಿರುವ ನ್ಯೂಯಾರ್ಕ್ ಮೂಲದ ಕ್ರೆಡಿಟ್ ರಿಸರ್ಚ್ ಫರ್ನರ್ಸ್ ಸಂಸ್ಥೆ ವರದಿಯಲ್ಲಿ ಇಂತಹ ಆಘಾತಕಾರಿ ಅಂಶಗಳು ಹೊರಬಂದಿವೆ ಎಂದಿರುವ ಕಾಂಗ್ರೆಸ್‌,‘ದೇಶದ ಆರ್ಥಿಕತೆಯನ್ನು ಅಪಾಯಕ್ಕೆ ದೂಡುವ ಇಂತಹ ಸಾಲಗಳ ಮಂಜೂರಾತಿಗಾಗಿ ಬ್ಯಾಂಕ್‌ಗಳ ಮೇಲೆ ಒತ್ತಡ ಹೇರುತ್ತಿರುವವರು ಯಾರೆನ್ನುವುದು ಗೊತ್ತಾಗಬೇಕು’ ಎಂದೂ ಒತ್ತಾಯಿಸಿದೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಗೌರವ್‌ ವಲ್ಲಭ್‌,ದೇಶದಆರ್ಥಿಕತೆ ಮತ್ತು ಹಣಕಾಸು ಸ್ಥಿತಿಯನ್ನು ಬಿಜೆಪಿ ಸರ್ಕಾರ ಎಷ್ಟರ ಮಟ್ಟಿಗೆ ಹಾಳುಮಾಡಿದೆ ಎನ್ನುವುದರ ಬಗ್ಗೆ ಯಾರಾದಾರೂ ವಿಶ್ಲೇಷಣೆ ಮಾಡಿದರೆ, ಇದು ದೇಶಕ್ಕೆ ಒದಗಿರುವ ದೊಡ್ಡ ಗಂಡಾಂತರ ಎಂದು ಹೇಳಲು ಬೇರೆ ಕಾರಣಗಳೇ ಬೇಕಿಲ್ಲ ಎಂದರು.

ADVERTISEMENT

ದೇಶ ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟದಲ್ಲಿದೆ. ಹೀಗಿರುವಾಗ ‘ಸರ್ಕಾರದ ಕೆಲವು ಸ್ನೇಹಿತರಿಗೆ’ ಭರಪೂರ ಸಾಲ ಕೊಟ್ಟಿರುವುದು ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಆರ್ಥಿಕತೆ ಮತ್ತು ಬ್ಯಾಂಕುಗಳನ್ನು ಭಾರಿ ಅಪಾಯದಲ್ಲಿ ಸಿಲುಕಿಸುವ ದೊಡ್ಡ ಮೊತ್ತದ ಸಾಲ ನೀಡುವಂತೆ ಎಸ್‌ಬಿಐನಂತಹ ಬ್ಯಾಂಕುಗಳ ಮೇಲೆ ಒತ್ತಡ ಹೇರಿದವರು ಯಾರು? ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇದಕ್ಕೆ ಉತ್ತರಿಸಬೇಕು ಎಂದುವಲ್ಲಭ್‌ ಒತ್ತಾಯಿಸಿದರು.

ಎನ್‌ಡಿಟಿವಿ ಸಂಸ್ಥಾಪಕರ ಅನುಮತಿ ಇಲ್ಲದೇ, ಅವರೊಂದಿಗೆ ಚರ್ಚಿಸದೇ ವಾಹಿನಿಯಶೇ 29.19ರಷ್ಟು ಪಾಲನ್ನು ಅದಾನಿ ಗ್ರೂಪ್ ಸ್ವಾಧೀನಕ್ಕೆ ತೆಗೆದುಕೊಂಡಿರುವುದು ಹೊಸ ಗಿಮಿಕ್‌. ಪ್ರಮುಖ ಸುದ್ದಿ ವಾಹಿನಿಯನ್ನು ಹಗೆತನದಿಂದ ಸ್ವಾಧೀನಪಡಿಸಿಕೊಳ್ಳುತ್ತಿರುವುದು ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ.ಹಣಕಾಸು ಸಚಿವಾಲಯ ಮತ್ತು ಸೆಬಿ ಏಕೆ ಈ ವಿಷಯದಲ್ಲಿ ತೆಪ್ಪಗಿವೆ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.