ADVERTISEMENT

ಮುಸ್ಲಿಮರಿಂದ ಹಿಂದೂ ಮಹಿಳೆಯ ಅಂತ್ಯಸಂಸ್ಕಾರ

ಕೋವಿಡ್‌–19 ಲಾಕ್‌ಡೌನ್‌ನಲ್ಲಿ ಮಾನವೀಯತೆ ಸಾಕ್ಷಿಯಾದ ಕಾರ್ಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 20:00 IST
Last Updated 16 ಏಪ್ರಿಲ್ 2020, 20:00 IST
   

ಭೋಪಾಲ್‌: ಲಾಕ್‌ಡೌನ್‌ ಸಂದರ್ಭದಲ್ಲಿ ಧಾರ್ಮಿಕ ತೊಡಕುಗಳನ್ನು ಮೀರಿ ಇಲ್ಲಿನ ಮುಸ್ಲಿಮರು, ಹಿಂದೂ ಮಹಿಳೆಯೊಬ್ಬರ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ನಗರದ ತೀಲಾ ಜಮಲ್ಪುರಾ ಪ್ರದೇಶದಲ್ಲಿ ಯಕೃತ್‌ ಸಮಸ್ಯೆಯಿಂದ ಬಳಲುತ್ತಿದ್ದ 50 ವರ್ಷದ ಮಹಿಳೆಯೊಬ್ಬರು ಬುಧವಾರ ಸಾವಿಗೀಡಾಗಿದ್ದರು. ಆದರೆ, ಲಾಕ್‌ಡೌನ್‌ನಿಂದ ಮಹಿಳೆಯ ಸಂಬಂಧಿಕರು ಬರಲು ಸಾಧ್ಯವಾಗಲಿಲ್ಲ. ಆಗ, ಮಹಿಳೆಯ ಮನೆಯ ನೆರೆಹೊರೆಯಲ್ಲಿದ್ದ ಮುಸ್ಲಿಮರೇ ಅಂತ್ಯಸಂಸ್ಕಾರ ನಡೆಸಲು ಮುಂದಾಗಿ ಕೋಮು ಸೌಹಾರ್ದಕ್ಕೆ ಸಾಕ್ಷಿಯಾದರು.

ಮುಖಕ್ಕೆ ಮಾಸ್ಕ್‌ ಹಾಗೂ ತಲೆಗೆ ಟೋಪಿ ಧರಿಸಿದ್ದ ಮುಸ್ಲಿಮರು, ಮಹಿಳೆಯ ದೇಹವನ್ನು ತಮ್ಮ ಭುಜದ ಮೇಲೆ ಇರಿಸಿಕೊಂಡು ಸ್ಮಶಾನಕ್ಕೆ ಕೊಂಡೊಯ್ಯುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ADVERTISEMENT

‘ಸಮೀಪದಲ್ಲಿ ಮಹಿಳೆಯ ಆಪ್ತ ಸಂಬಂಧಿಕರು ಯಾರೂ ಇರಲಿಲ್ಲ. ಲಾಕ್‌ಡೌನ್‌ನಿಂದ, ಅವರ ಇತರ ಸಂಬಂಧಿಕರೂ ಬರಲು ಸಾಧ್ಯವಾಗಲಿಲ್ಲ. ನಗರದ ಚೋಲಾ ವಿಷಾರಘಟ್‌ನಲ್ಲಿರುವ ಸ್ಮಶಾನಕ್ಕೆ ನಾವೇ ದೇಹವನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಿದೆವು’ ಎಂದು ಎಲ್ಲ ವ್ಯವಸ್ಥೆ ಮಾಡಿದ್ದ ಶಹೀದ್‌ ಖಾನ್‌ ವಿವರಿಸಿದರು.

‘ಮಹಿಳೆಯ ಪತಿ ಸಣ್ಣ ವ್ಯಾಪಾರಿ. ಇವರಿಗೆ ಇಬ್ಬರು ಪುತ್ರರಿದ್ದಾರೆ. ಇಡೀ ಕುಟುಂಬ ಬಡತನದಲ್ಲಿ ಜೀವನ ಸಾಗಿಸುತ್ತಿದೆ. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ‘ಲಾಕ್‌ಡೌನ್‌ ಸಂದರ್ಭದಲ್ಲಿನ ನಿಯಮದಂತೆ ಕೇವಲ 20 ಮಂದಿ ಮಾತ್ರ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡಿದ್ದರು. ಇಲ್ಲದಿದ್ದರೆ ಇಡೀ ಸಮುದಾಯ ಬರುತ್ತಿತ್ತು’ ಎಂದು ತಿಳಿಸಿದರು.

‘ಇಂತಹ ಕಾರ್ಯಗಳು ಕೋಮು ಸೌಹಾರ್ದ, ಭಾತೃತ್ವಕ್ಕೆ ಸಾಕ್ಷಿಯಾಗಿವೆ’ ಎಂದು ಮಾಜಿ ಮುಖ್ಯಮಂತ್ರಿ ಕಮಲ್‌ ನಾಥ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.