ADVERTISEMENT

ಬಾಲಾಪರಾಧಿಯನ್ನು ವಯಸ್ಕರ ಜೈಲಿಗೆ ಹಾಕುವುದು ವೈಯಕ್ತಿಕ ಸ್ವಾತಂತ್ರ್ಯಹರಣ: ಸುಪ್ರೀಂ

ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 13:49 IST
Last Updated 13 ಸೆಪ್ಟೆಂಬರ್ 2022, 13:49 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ‘ಬಾಲಾಪರಾಧಿಗಳನ್ನು ವಯಸ್ಕರಿರುವ ಜೈಲಿಗೆ ದಾಖಲು ಮಾಡುವುದು ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡಿದಂತೆ’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

‘ಮಗುವು ಒಮ್ಮೆ ವಯಸ್ಕ ಅಪರಾಧ ನ್ಯಾಯ ವ್ಯವಸ್ಥೆಯಡಿ ಸಿಲುಕಿಕೊಂಡರೆ ಅದರಿಂದ ಪಾರಾಗುವುದು ಕಷ್ಟ’ ಎಂದು ನ್ಯಾಯಮೂರ್ತಿಗಳಾದ ದಿನೇಶ್‌ ಮಾಹೇಶ್ವರಿ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ದ್ವಿಸದಸ್ಯ ಪೀಠ ಮಂಗಳವಾರ ಹೇಳಿದೆ.

‘ಮಕ್ಕಳಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಕುರಿತ ಅರಿವಿನ ಕೊರತೆ ಇದೆ. ಕಾನೂನು ನೆರವು ಕಾರ್ಯಕ್ರಮಗಳು ಮೂಲೆಗೆ ಸರಿದಿವೆ. ಇದು ಕಹಿ ಸತ್ಯ’ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

ಕೊಲೆ ಆರೋಪದಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನೋದ್‌ ಕತಾರಾ ಎಂಬಾತ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಅಪರಾಧ ನಡೆದಾಗ ಆತನ ವಯಸ್ಸು ಎಷ್ಟಿತ್ತು ಎಂಬುದನ್ನು ಪತ್ತೆಹಚ್ಚಲು ಸಿವಿಲ್‌ ಆಸ್ಪತ್ರೆಯಲ್ಲಿ ಆತನನ್ನು ಮೂಳೆಯ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿತು. ವಿಕಿರಣಶಾಸ್ತ್ರಜ್ಞ ಸೇರಿ ಒಟ್ಟು ಮೂವರು ವೈದ್ಯರ ತಂಡವನ್ನು ನಿಯೋಜಿಸುವಂತೆಯೂ ನಿರ್ದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.