ADVERTISEMENT

ಸಂಯುಕ್ತ ರಂಗಕ್ಕೆ ಬಲ ತುಂಬಲು ಕೆಸಿಆರ್‌ ಸಿದ್ಧ

ಪಿಟಿಐ
Published 20 ಡಿಸೆಂಬರ್ 2018, 20:13 IST
Last Updated 20 ಡಿಸೆಂಬರ್ 2018, 20:13 IST
ಕೆ. ಚಂದ್ರಶೇಖರ ರಾವ್‌
ಕೆ. ಚಂದ್ರಶೇಖರ ರಾವ್‌   

ಹೈದರಾಬಾದ್‌: ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ಹೊರಗಿಟ್ಟು ಪ್ರಾದೇಶಿಕ ಪಕ್ಷಗಳ ಸಂಯುಕ್ತ ರಂಗವೊಂದನ್ನು ಕಟ್ಟುವ ಪ್ರಯತ್ನಕ್ಕೆ ಇನ್ನಷ್ಟು ಬಲ ತುಂಬಲು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಂದಾಗಿದೆ.

ಎಸ್‌ಪಿ, ಬಿಎಸ್‌ಪಿ ಮತ್ತು ತೃಣಮೂಲ ಕಾಂಗ್ರೆಸ್‌ ಜತೆಗೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಲೋಕಸಭೆಯಲ್ಲಿ ಟಿಆರ್‌ಎಸ್‌ನ ಉಪನಾಯಕ ಬಿ.ವಿನೋದ್ ಕುಮಾರ್‌ ಹೇಳಿದ್ದಾರೆ.

ಬಿಜೆಪಿ ವಿರೋಧಿ ಮತಗಳನ್ನು ಒಡೆದು ಬಿಜೆಪಿಗೆ ಲಾಭ ಮಾಡಿಕೊಡುವುದು ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರ ಉದ್ದೇಶ ಎಂಬ ಭಾವನೆ ಯುಪಿಎ ಅಂಗಪಕ್ಷಗಳಲ್ಲಿ ಇದೆ ಎಂಬುದನ್ನು ವಿನೋದ್‌ ಕುಮಾರ್‌ ಅಲ್ಲಗಳೆದಿದ್ದಾರೆ.

ADVERTISEMENT

ತಮ್ಮ ರಾಜ್ಯಗಳಲ್ಲಿ ಭಾರಿ ಪ್ರಭಾವ ಹೊಂದಿರುವ ಹಲವು ಪ್ರಾದೇಶಿಕ ಪಕ್ಷಗಳಿವೆ. ಈ ಪಕ್ಷಗಳು ಒಂದಾದರೆ ಕಾಂಗ್ರೆಸ್‌ ಅಥವಾ ಬಿಜೆಪಿ ಜತೆಗಿನ ಚೌಕಾಶಿ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ಸಂಯುಕ್ತ ರಂಗದ ಹಿಂದಿರುವ ಚಿಂತನೆ. ಇಲ್ಲದಿದ್ದರೆ, ಈ ದೊಡ್ಡ ಪಕ್ಷಗಳು ಒಂದೊಂದು ಪ್ರಾದೇಶಿಕ ಪಕ್ಷಗಳ ಜತೆಗೆ ಚೌಕಾಶಿ ಮಾಡಿ ಅವುಗಳ ಮೇಲೆ ಸವಾರಿ ಮಾಡುತ್ತವೆ ಎಂದು ವಿನೋದ್‌ ಕುಮಾರ್‌ ಪ್ರತಿಪಾದಿಸಿದ್ದಾರೆ.

‘ನಮ್ಮ ಈ ಯೋಚನೆಯನ್ನು ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ನಾವು ಕಾಂಗ್ರೆಸ್‌ ಜತೆಗೆ ಇದ್ದೇವೆ ಎಂದು ಬಿಜೆಪಿ ಆರೋಪಿಸಿದರೆ, ಬಿಜೆಪಿ ಜತೆಗೆ ಇದ್ದೇವೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.