ADVERTISEMENT

ಕಾಂಗ್ರೆಸ್‌ನಿಂದ ತೀವ್ರ ಚೌಕಾಶಿ ಸಾಧ್ಯತೆ

ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಜೆಡಿಎಸ್‌ಗೆ ಸ್ಥಾನ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:09 IST
Last Updated 20 ಡಿಸೆಂಬರ್ 2018, 20:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉತ್ತರದ ಮೂರು ರಾಜ್ಯಗಳ ಚುನಾವಣಾ ಗೆಲುವಿನಿಂದ ಉತ್ತೇಜಿತವಾಗಿರುವ ಕಾಂಗ್ರೆಸ್‌ ಪಕ್ಷ ಲೋಕಸಭೆ ಚುನಾವಣೆಗೆ ಸನ್ನದ್ಧವಾಗುತ್ತಿದೆ. ರಾಜ್ಯದಲ್ಲಿ ಜೆಡಿಎಸ್‌ ಜೊತೆಗಿನ ಮೈತ್ರಿ ಮುಂದುವರಿಸುವ ಇಚ್ಛೆ ಹೊಂದಿದ್ದರೂ ಸ್ಥಾನ ಹಂಚಿಕೆಗಾಗಿ ತೀವ್ರ ಚೌಕಾಶಿ ನಡೆಸುವ ಸಾಧ್ಯತೆ ಇದೆ.

‘ಇಬ್ಬರು ಹಾಲಿ ಸದಸ್ಯರಿರುವ ಹಾಸನ ಮತ್ತು ಮಂಡ್ಯ ಕ್ಷೇತ್ರಗಳಲ್ಲದೆ, ಇತರ ಮೂರು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್‌ ಸ್ಪರ್ಧೆಗೆ ಅವಕಾಶ ನೀಡಿ, ಮಿಕ್ಕೆಲ್ಲ ಕ್ಷೇತ್ರಗಳಲ್ಲಿ ನಾವೇ ಸ್ಪರ್ಧಿಸೋಣ’ ಎಂಬ ಅಭಿಪ್ರಾಯ ರಾಜ್ಯ ಕಾಂಗ್ರೆಸ್‌ ಮುಖಂಡರದ್ದಾಗಿದೆ. ಇದನ್ನು ಪಕ್ಷದ ವರಿಷ್ಠರೂ ಒಪ್ಪಿಕೊಳ್ಳುವ ಸಾಧ್ಯತೆಗಳೇ ಅಧಿಕವಾಗಿವೆ.

ಕ್ಷೇತ್ರ ಹಂಚಿಕೆ ಕುರಿತು ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಪಕ್ಷದ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಇತ್ತೀಚೆಗಷ್ಟೇ ಸಭೆ ನಡೆಸಿರುವ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ‘ಜೆಡಿಎಸ್‌ ಜೊತೆ ಸ್ಥಾನ ಹೊಂದಾಣಿಕೆ ಬೇಡವೇ ಬೇಡ’ ಎಂಬ ಮಾತುಗಳೇ ಕೇಳಿ ಬಂದಿದೆ. ಲೋಕಸಭೆ ಚುನಾವಣೆಯನ್ನು ಮೈತ್ರಿಯೊಂದಿಗೆ ಎದುರಿಸುವುದಕ್ಕೆ ವಿರೋಧವೂ ವ್ಯಕ್ತವಾಗಿದೆ.

ADVERTISEMENT

‘ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ನಿಟ್ಟಿನಲ್ಲಿ ಜೆಡಿಎಸ್‌ನೊಂದಿಗೆ ಚುನಾವಣಾಪೂರ್ವ ಸಖ್ಯ ಮುಂದುವರಿಸುವುದು ಅತ್ಯಗತ್ಯ’ ಎಂಬ ಸತ್ಯವನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಮನಗಂಡಿದ್ದಾರೆ. ಆದರೂ ಮಿತ್ರ ಪಕ್ಷಕ್ಕೆ ಹೆಚ್ಚು ಕ್ಷೇತ್ರ ಬಿಟ್ಟು ಕೊಡಬಹುದಾದ ಔದಾರ್ಯವನ್ನು ಅವರು ತೋರುವ ನಂಬಿಕೆ ಇಲ್ಲ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸೀಟು ಹಂಚಿಕೆ ಕುರಿತ ಮಾತುಕತೆ ಪ್ರಕ್ರಿಯೆ ಇನ್ನಷ್ಟೇ ಆರಂಭ ಆಗಬೇಕಿದೆ. ಹಳೆ ಮೈಸೂರು ಭಾಗವೂ ಸೇರಿದಂತೆ ರಾಜ್ಯದ 12 ಕ್ಷೇತ್ರಗಳಿಗೆ ಜೆಡಿಎಸ್‌ ಬೇಡಿಕೆ ಇರಿಸಿದೆ. ಹಾಲಿ ಸದಸ್ಯರಿರುವ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಮೈಸೂರು, ಬೆಂಗಳೂರು ಉತ್ತರ, ಶಿವಮೊಗ್ಗ ಅಥವಾ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಒಂದನ್ನು ಬಿಟ್ಟುಕೊಡಬಹುದಾಗಿದೆ.

80 ಸ್ಥಾನಗಳನ್ನು ಹೊಂದಿರುವ ಪಕ್ಷವು 37 ಸದಸ್ಯ ಬಲದವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವ ಕಾರಣ ಜೆಡಿಎಸ್‌ ಸಹ ಕಾಂಗ್ರೆಸ್‌ನ ನಿರ್ಧಾರಕ್ಕೆ ಬದ್ಧವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಪಕ್ಷಕ್ಕೆ ಪ್ರಬಲ ಬೆಂಬಲ ಇರುವ, ಗೆಲುವಿನ ಸಾಧ್ಯತೆಗಳೇ ಅಧಿಕವಾಗಿರುವ ಹಳೆ ಮೈಸೂರು ಭಾಗದ ಕೆಲವು ಕ್ಷೇತ್ರಗಳಿಗೆ ಜೆಡಿಎಸ್‌ ವರಿಷ್ಠರು ಬೇಡಿಕೆ ಸಲ್ಲಿಸಲೂಬಹುದು. ಅಂತೆಯೇ, ರಾಷ್ಟ್ರೀಯ ಪಕ್ಷಗಳು ಎಂದೂ ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸಬಾರದು. ಮಿಜೋರಾಂ ಮತ್ತು ತೆಲಂಗಾಣಗಳಲ್ಲಿ ನಡೆದ ಚುನಾವಣೆಯ ಫಲಿತಾಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿಕೆ ನೀಡಿಯೂ ಆಗಿದೆ.

ಆದರೆ, ಹಾಲಿ ಸದಸ್ಯರಿರುವ ಯಾವುದೇ ಕ್ಷೇತ್ರವನ್ನೂ ಬಿಟ್ಟುಕೊಡುವ ನಿರ್ಧಾರವನ್ನು ಪಕ್ಷ ಕೈಗೊಳ್ಳಲಾರದು ಎಂಬುದು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.