ADVERTISEMENT

ನಿಗದಿತ ಅವಧಿಯಲ್ಲೇ ಚುನಾವಣೆ: ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರಾ

ಪಿಟಿಐ
Published 1 ಮಾರ್ಚ್ 2019, 20:11 IST
Last Updated 1 ಮಾರ್ಚ್ 2019, 20:11 IST
ಸುನಿಲ್‌ ಅರೋರಾ
ಸುನಿಲ್‌ ಅರೋರಾ   

ಲಖನೌ: ಲೋಕಸಭೆ ಚುನಾವಣೆಯನ್ನು ನಿಗದಿತ ಅವಧಿಯಲ್ಲೇ ನಡೆಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರಾ ಸ್ಪಷ್ಟಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿಯ ಕಾರಣ ಚುನಾವಣೆ ಮುಂದೂಡುವ ಸಾಧ್ಯತೆಗಳ ಕುರಿತ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ

ಚುನಾವಣೆ ಸಿದ್ಧತೆಗಳ ಕುರಿತು ಇಲ್ಲಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಯೋಗದ ಹೊಸ ಅಧಿಸೂಚನೆ ಅನ್ವಯ ಅಭ್ಯರ್ಥಿಗಳು ದೇಶದಲ್ಲಿರುವ ಆಸ್ತಿ ವಿವರಗಳ ಜತೆಯೇ ವಿದೇಶದಲ್ಲಿನ ಆಸ್ತಿ ಮಾಹಿತಿಯನ್ನು ಸಹ ನೀಡಬೇಕು. ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಲಿದೆ. ಯಾವುದಾದರೂ ವ್ಯತ್ಯಾಸಗಳಿದ್ದರೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು ಹಾಗೂ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ADVERTISEMENT

ವಿದ್ಯುನ್ಮಾನ ಮತ ಯಂತ್ರಗಳು ಫುಟ್‌ಬಾಲ್‌ಗಳಾಗಿವೆ: ಸಿಇಸಿ

‘ವಿದ್ಯುನ್ಮಾನ ಮತ ಯಂತ್ರಗಳನ್ನು ಫುಟ್‌ಬಾಲ್‌ಗಳನ್ನಾಗಿ ಮಾಡಲಾಗಿದೆ’ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಎರಡು ದಶಕಗಳಿಂದ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಲಾಗುತ್ತಿದೆ. 2014ರಲ್ಲಿ ಲೋಕಸಭೆ ಚುನಾವಣೆ ಬಳಿಕ ದೆಹಲಿ ವಿಧಾನಸಭೆ ಚುನಾವಣೆಗಳು ನಡೆದವು. ಈ ಎರಡು ಚುನಾವಣೆಗಳ ನಡುವೆ ನಾಲ್ಕು ತಿಂಗಳ ಅಂತರವಿತ್ತು. ಫಲಿತಾಂಶವೂ ವಿಭಿನ್ನವಾಗಿತ್ತು’ ಎಂದು ವಿವರಿಸಿದರು.

‘ಗೊತ್ತಿದ್ದೋ, ಗೊತ್ತಿಲ್ಲದೆಯೋ ವಿದ್ಯುನ್ಮಾನ ಮತ ಯಂತ್ರಗಳನ್ನು ಫುಟ್‌ಬಾಲ್‌ಗಳನ್ನಾಗಿ ಮಾಡಲಾಗಿದೆ. ಫಲಿತಾಂಶ ‘‘ಎಕ್ಸ್‌‘‘ ಎಂದು ದೊರೆತರೆ ಆಕ್ಷೇಪಗಳಿಲ್ಲ. ಒಂದು ವೇಳೆ ‘‘ವೈ’ ಎಂದಾದರೆ ತಪ್ಪುಗಳನ್ನು ಹುಡುಕಲಾಗುತ್ತಿದೆ’ ಎಂದು ಪರೋಕ್ಷವಾಗಿ ರಾಜಕೀಯ ಪಕ್ಷಗಳನ್ನು ಕುಟುಕಿದರು.

‘ಮತದಾರರ ಭಾವನೆಗಳನ್ನು ಅರಿತುಕೊಂಡು ಮತದಾನ ಖಾತರಿಪಡಿಸಲು ವಿವಿಪ್ಯಾಟ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ವಿದ್ಯುನ್ಮಾನ ಮತ ಯಂತ್ರಗಳನ್ನು ಭಾರತ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಮತ್ತು ಎಲೆಕ್ಟ್ರಾನ್ಸಿಕ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಇಸಿಐಎಲ್‌)ನಂತಹ ಪ್ರತಿಷ್ಠಿತ ಕಂಪನಿಗಳು ತಯಾರಿಸಿವೆ. ಈ ಕಂಪನಿಗಳು ರಕ್ಷಣಾ ಇಲಾಖೆಯ ಸಾಮಗ್ರಿಗಳನ್ನು ತಯಾರಿಸುತ್ತಿವೆ’ ಎಂದು ಸಮರ್ಥಿಸಿಕೊಂಡರು.

‘ವಿದ್ಯುನ್ಮಾನ ಮತ ಯಂತ್ರಗಳ ಮೇಲೆ ನಿಗಾವಹಿಸಲು ತಾಂತ್ರಿಕ ಸಲಹಾ ಸಮಿತಿ ರಚಿಸಲಾಗಿದೆ. ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರ ಈ ಸಮಿತಿಗೆ ಇದೆ. ಚುನಾವಣಾ ಆಯೋಗಕ್ಕೂ ಸಹ ಅಂತಹ ಅಧಿಕಾರ ಇಲ್ಲ. ಈ ಸಮಿತಿಯಲ್ಲಿ ಶ್ರೇಷ್ಠ ವಿಜ್ಞಾನಿಗಳಿದ್ದಾರೆ. ಹೀಗಾಗಿ, ಸಂದೇಹ ಪಡುವ ಅಗತ್ಯವಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.