ADVERTISEMENT

75ನೇ ವಯಸ್ಸಿಗೆ ನಿವೃತ್ತಿ: ಅಡ್ವಾಣಿಯವರಿಗೆ ಮಾತ್ರ ಅನ್ವಯವೇ; ಮೋದಿಗೆ ಕೇಜ್ರಿವಾಲ್

ಶಮಿನ್‌ ಜಾಯ್‌
Published 12 ಮೇ 2024, 13:33 IST
Last Updated 12 ಮೇ 2024, 13:33 IST
   

ನವದೆಹಲಿ: ಬಿಜೆಪಿಯಲ್ಲಿರುವ 75ನೇ ವಯಸ್ಸಿಗೆ ರಾಜಕೀಯ ನಿವೃತ್ತಿ ನಿಯಮದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಿವೃತ್ತಿ ಬಗ್ಗೆ ಪ್ರಶ್ನೆ ಎತ್ತುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.

ಬಿಜೆಪಿಯಲ್ಲಿರುವ ಈ ನಿಯಮವು ಕೇವಲ ಎಲ್‌.ಕೆ. ಅಡ್ವಾಣಿಯವರಿಗೆ ಅನ್ವಯವೇ? ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟಪಡಿಸಲಿ ಎಂದು ಕೇಜ್ರಿವಾಲ್ ಕೇಳಿದ್ದಾರೆ.

ಈ ಸೆಪ್ಟೆಂಬರ್‌ಗೆ ಪ್ರಧಾನಿ ಮೋದಿ ಅವರು 75ನೇ ವಸಂತಕ್ಕೆ ಕಾಲಿಡುತ್ತಿದ್ದು, ಬಿಜೆಪಿಯ ನಿಯಮಗಳ ಪ್ರಕಾರ ಅವರು ಮತ್ತೆ ಪ್ರಧಾನಿ ಆಗಲಾರರು. ಅಮಿತ್ ಶಾ ಪ್ರಧಾನಿ ಆಗುತ್ತಾರೆ. ಅಮಿತ್ ಶಾಗಾಗಿ ಮೋದಿ ಮತ ಕೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಮಿತ್ ಶಾ, ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಮೋದಿಯವರೇ ಪ್ರಧಾನಿಯಾಗಲಿದ್ದು, ಪೂರ್ಣಾಧಿಕಾರ ನಡೆಸಲಿದ್ದಾರೆ ಎಂದು ಹೇಳಿದ್ದರು. ಆದರೆ, ಪ್ರಧಾನಿ ಮೋದಿ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಇದೇ ವಿಚಾರವನ್ನು ಇಟ್ಟುಕೊಂಡು ಕೇಜ್ರಿವಾಲ್ ಈಗ ಮೋದಿಗೆ ಪ್ರಶ್ನೆ ಹಾಕಿದ್ದಾರೆ.

ADVERTISEMENT

ಇಂದು ‘ಕೇಜ್ರಿವಾಲ್ ಕಿ ಗ್ಯಾರಂಟಿ’ ಘೋಷಣೆಗಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, 75 ವರ್ಷಕ್ಕೆ ರಾಜಕೀಯದಿಂದ ನಿವೃತ್ತಿ ನಿಯಮವನ್ನು ಮೋದಿಯವರೇ ಶುರು ಮಾಡಿದ್ದಾರೆ. ಅದರನ್ವಯ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಂತೆ ಹಲವು ನಾಯಕರು ನಿವೃತ್ತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.

‘ಈ ಕುರಿತು ಕೇಳಿದರೆ ಆ ನಿಯಮ ಮೋದಿಯವರಿಗೆ ಅನ್ವಯವಾಗುವುದಿಲ್ಲ ಎಂದು ಹಲವು ನಾಯಕರು ಹೇಳುತ್ತಾರೆ. ಈ ಹಿಂದೆ ಪಕ್ಷದ ಹಿರಿಯ ನಾಯಕರ ಬಗ್ಗೆ ಅದೇ ಹೇಳಿಕೆ ಬಂದಾಗ ಪಕ್ಷದ ನಾಯಕರು ಅದನ್ನು ಬೆಂಬಲಿಸಿದ್ದರು. ಸ್ವತಃ ಪ್ರಧಾನ ಮಂತ್ರಿ ಸಹ ಈ ಬಗ್ಗೆ ಏನೂ ಹೇಳುತ್ತಿಲ್ಲವೇಕೆ’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

‘ತಾವೇ ಮಾಡಿರುವ ನಿಯಮವನ್ನು ಪ್ರಧಾನಿ ನರೇಂದ್ರ ಮೋದಿ ಅನುಸರಿಸುವುದಿಲ್ಲ ಎಂದು ನನಗೆ ಅನ್ನಿಸುತ್ತಿಲ್ಲ. ಎಲ್.ಕೆ. ಅಡ್ವಾಣಿ ನಿವೃತ್ತಿಗೆ ಕಾರಣವಾದ ತಾವು ರೂಪಿಸಿದ ನಿಯಮವನ್ನು ತಾವೇ ಅನುಸರಿಸುವುದಿಲ್ಲ ಎಂದು ಮೋದಿ ಹೇಳಿಲ್ಲ. ಇಲ್ಲವಾದರೆ, ಆ ನಿಯಮ ಮಾಡಿದ್ದು ಎಲ್..ಕೆ. ಅಡ್ವಾಣಿಯವರಿಗೆ ಮಾತ್ರವೆಂದು ಪ್ರಧಾನಿ ಹೇಳಿಬಿಡಲಿ. ಅಥವಾ ತಮ್ಮ ಉತ್ತರಾಧಿಕಾರಿ ಯಾರೆಂದು ಘೋಷಿಸಲಿ. ಈಗಾಗಲೇ ಅದಕ್ಕೆ ದೊಡ್ಡ ಪೈಪೋಟಿ ಇದೆ’ಎಂದಿದ್ದಾರೆ.

ಒಂದು ದೇಶ, ಒಬ್ಬ ನಾಯಕ ಪರಿಕಲ್ಪನೆಯಡಿ, ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಸೇರಿ ಬಿಜೆಪಿ ನಾಯಕರನ್ನೂ ಕಡೆಗಣಿಸಲಾಗಿದೆ ಎಂದೂ ಕೇಜ್ರಿವಾಲ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.