ADVERTISEMENT

ಲೋಕಸಭಾ ಚುನಾವಣೆ: 200ಕ್ಕೂ ಹೆಚ್ಚು ಕಾಲ್‌ ಸೆಂಟರ್‌ಗಳನ್ನು ತೆರೆಯಲಿರುವ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಸೆಪ್ಟೆಂಬರ್ 2023, 10:43 IST
Last Updated 1 ಸೆಪ್ಟೆಂಬರ್ 2023, 10:43 IST
ಬಿಜೆಪಿ
ಬಿಜೆಪಿ    

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ದೇಶದಾದ್ಯಂತ 200ಕ್ಕೂ ಹೆಚ್ಚು ಕಾಲ್‌ ಸೆಂಟರ್‌ಗಳನ್ನು ತೆರೆಯಲು ಮುಂದಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹಸಚಿವ ಅಮಿತ್‌ ಶಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಪ್ರಧಾನ ಕಾರ್ಯದರ್ಶಿ ಸುನೀಲ್‌ ಬನ್ಸಾಲ್‌ ಅವರು ಕಾಲ್‌ ಸೆಂಟರ್‌ ರಚನೆಯ ಹೊಣೆಯನ್ನು ಹೊತ್ತಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ ಎಂದು ಇಂಡಿಯಾ.ಕಾಮ್‌ ವೆಬ್‌ಸೈಟ್‌ ವರದಿ ಮಾಡಿದೆ.

ಸುನಿಲ್‌ ಬನ್ಸಾಲ್‌ ಅವರು ಕಾಲ್‌ ಸೆಂಟರ್‌ನ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. 30 ರಾಜ್ಯಗಳನ್ನು ಒಳಗೊಂಡಂತೆ ಸುಮಾರು 200ಕ್ಕೂ ಹೆಚ್ಚು ಕಾಲ್‌ ಸೆಂಟರ್‌ಗಳನ್ನು ತೆರೆಯಲಾಗುವುದು. ಇದರಲ್ಲಿ 20 ಸಾವಿರ ಜನರು ಕೆಲಸ ಮಾಡಲಿದ್ದಾರೆ. ದಿನದ 24 ಗಂಟೆಯೂ ಈ ಕಾಲ್‌ ಸೆಂಟರ್‌ ಕೆಲಸ ನಿರ್ವಹಿಸಲಿದೆ ಎಂದು ವರದಿಯಾಗಿದೆ.  

ADVERTISEMENT

ಈ ಕಾಲ್‌ ಸೆಂಟರ್‌ಗಳು ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಕೆಲಸ ಆರಂಭಿಸಲಿವೆ. ಪ್ರತಿ ಕಾಲ್ ಸೆಂಟರ್‌ನಲ್ಲಿ 20 ರಿಂದ 22 ಜನರು ಕೆಲಸ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಾರ್ವಿಸ್ ಕಂಪನಿಯು ಈ ಎಲ್ಲಾ ಕಾಲ್ ಸೆಂಟರ್‌ಗಳಿಗೆ ಸಾಫ್ಟ್‌ವೇರ್ ಮತ್ತು ತಾಂತ್ರಿಕ ಬೆಂಬಲ ನೀಡಲಿದೆ.

2019ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ದೇಶದಾದ್ಯಂತ 190 ಕಾಲ್ ಸೆಂಟರ್‌ಗಳನ್ನು ತೆರೆದಿತ್ತು. ಇದರಲ್ಲಿ 13 ಸಾವಿರ ಜನರು ಕೆಲಸ ಮಾಡಿದ್ದರು. ಕಳೆದ ಬಾರಿಯೂ ಜಾರ್ವಿಸ್ ಕಂಪನಿ ಬಿಜೆಪಿ ಪರ ಕೆಲಸ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.