ADVERTISEMENT

ಲೋಕಸಭೆ: ಅರಣ್ಯ ಸಂರಕ್ಷಣೆ ತಿದ್ದುಪಡಿ ಮಸೂದೆಗೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 12:55 IST
Last Updated 26 ಜುಲೈ 2023, 12:55 IST
ಭೂಪೇಂದ್ರ ಯಾದವ್‌  –ಪಿಟಿಐ ಚಿತ್ರ
ಭೂಪೇಂದ್ರ ಯಾದವ್‌  –ಪಿಟಿಐ ಚಿತ್ರ    

ನವದೆಹಲಿ: ರಕ್ಷಣಾ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಕೆಲ ನಿರ್ದಿಷ್ಟ ಯೋಜನೆಗಳಿಗೆ ವಿನಾಯಿತಿ ನೀಡುವ ಅಂಶಗಳನ್ನು ಒಳಗೊಂಡಿರುವ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ–2023 ಅನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

ಈ ಕುರಿತ ಚರ್ಚೆ ವೇಳೆ, ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರು ವಿರೋಧ ಪಕ್ಷಗಳ ಸಂಸದರ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಮಸೂದೆಯನ್ನು ಅಂಗೀಕರಿಸಲಾಯಿತು. ನಂತರ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ದೇಶದ ಗಡಿಗಳಿಂದ 100 ಕಿ.ಮೀ ಒಳಗಿನ ಪ್ರದೇಶಕ್ಕೆ ಅರಣ್ಯ ಸಂರಕ್ಷಣಾ ಕಾಯ್ದೆಯಿಂದ ವಿನಾಯಿತಿ ನೀಡುವ ಅಂಶಗಳನ್ನು ಈ ಮಸೂದೆ ಒಳಗೊಂಡಿದೆ.

ADVERTISEMENT

ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಅಥವಾ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಗುಂಟ 100 ಕಿ.ಮೀ ಒಳಗಿನ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಅರಣ್ಯ ಅನುಮೋದನೆ ಪಡೆಯುವುದರಿಂದ ಈ ತಿದ್ದುಪಡಿ ಮಸೂದೆ ವಿನಾಯಿತಿ ನೀಡುತ್ತದೆ.

ರೈಲು ಮಾರ್ಗ, ಜನವಸತಿ ಪ್ರದೇಶ ಇಲ್ಲವೇ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಂಬಂಧ ಸರ್ಕಾರ ನಿರ್ವಹಣೆ ಮಾಡುವ ರಸ್ತೆ ಹಾಗೂ ರಸ್ತೆ ಬದಿಯ ಸೌಕರ್ಯಗಳಿಗಾಗಿ ಬಳಸುವ ಗರಿಷ್ಠ 2.4 ಎಕರೆ ಪ್ರದೇಶಕ್ಕೆ ಅರಣ್ಯ ಕಾಯ್ದೆಯ ವಿವಿಧ ಅಂಶಗಳಿಂದ ವಿನಾಯಿತಿಯನ್ನು ಈ ಮಸೂದೆ ಒದಗಿಸುತ್ತದೆ.

ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶಗಳಲ್ಲಿ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಬಳಸುವ 5 ಹೆಕ್ಟೇರ್‌ ಮೀರದ ಜಮೀನಿಗೆ ಕಾಯ್ದೆಯ ವಿವಿಧ ಅಂಶಗಳಿಂದ ವಿನಾಯಿತಿ ನೀಡಲಾಗುತ್ತದೆ. ಈ ಬಾಧಿತ ಪ್ರದೇಶಗಳಲ್ಲಿ ಭದ್ರತಾ ಮೂಲಸೌಕರ್ಯ, ಅರೆಸೇನಾ ಪಡೆಗಳ ಶಿಬಿರಗಳ ನಿರ್ಮಾಣಕ್ಕೆ ಉಪಯೋಗಿಸುವ ಗರಿಷ್ಠ 10 ಹೆಕ್ಟೇರ್‌ ಪ್ರದೇಶಕ್ಕೂ ಅರಣ್ಯ ಅನುಮೋದನೆಯಿಂದ ವಿನಾಯಿತಿಯನ್ನು ಈ ಮಸೂದೆ ಒದಗಿಸುತ್ತದೆ.

ಅರಣ್ಯ ಪ್ರದೇಶಗಳಲ್ಲಿ ಮೃಗಾಲಯಗಳು ಹಾಗೂ ಸಫಾರಿಗಳ ಸ್ಥಾಪನೆ, ಪ್ರವಾಸೋದ್ಯಮ ಸೌಲಭ್ಯಗಳ ಅಭಿವೃದ್ಧಿಗೆ ಅನುಮತಿ ನೀಡುವುದನ್ನು ಈ ತಿದ್ದುಪಡಿ ಮಸೂದೆ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.