ADVERTISEMENT

ಗೋಡ್ಸೆ ದೇಶಭಕ್ತನೆಂಬ ವಿವಾದ: ಮಿತ್ರ ಪಕ್ಷದ ನಾಯಕರ ಹೇಳಿಕೆಗೆ ನಿತೀಶ್‌ ಅಸಮಾಧಾನ

ಏಜೆನ್ಸೀಸ್
Published 19 ಮೇ 2019, 11:39 IST
Last Updated 19 ಮೇ 2019, 11:39 IST
   

ಪಟ್ನಾ:ಮಹಾತ್ಮ ಗಾಂಧೀಜಿಯ ಕೊಂದ ನಾಥುರಾಮ್‌ ಗೋಡ್ಸೆ ದೇಶಭಕ್ತ ಎಂಬ ಬಿಜೆಪಿ ನಾಯಕರ ಹೇಳಿಕೆ, ಅಭಿಪ್ರಾಯಗಳವಿರುದ್ಧ ಮಿತ್ರ ಪಕ್ಷ ಜೆಡಿಯುನ ವರಿಷ್ಠ,ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ವಿವಾದಿತ ಹೇಳಿಕೆಗಳ ಕುರಿತು ಬಿಹಾರದ ರಾಜಧಾನಿ ಪಟ್ನಾದಲ್ಲಿ ಇಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿರುವ ನಿತೀಶ್‌, ‘ಇದು ಖಂಡನೀಯ. ಇಂಥ ಹೇಳಿಕೆಗಳ ಕುರಿತು ಬಿಜೆಪಿ ಆಲೋಚಿಸಬೇಕು. ಅವರ ವಿರುದ್ಧ ತೆಗೆದುಕೊಳ್ಳುವ ಕ್ರಮ ಆ ಪಕ್ಷದ ಆಂತರಿಕ ಸಂಗತಿ. ಆದರೆ, ಇಂಥ ಬೆಳವಣಿಗೆಗಳನ್ನು ನಾವು ಸಹಿಸಿಕೊಳ್ಳಬಾರದು,’ ಎಂದು ಅವರು ಹೇಳಿದ್ದಾರೆ.

ಏನಿದು ವಿವಾದ?

ADVERTISEMENT

‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆ ಮಾಡಿದ ನಾಥುರಾಮ್‌ ಗೋಡ್ಸೆಯೇ ಮೊದಲ ಭಯೋತ್ಪಾದಕ’ ಎಂಬ ನಟ, ರಾಜಕಾರಣಿ ಕಮಲ್‌ ಹಾಸನ್‌ ಅವರ ಹೇಳಿಕೆಗೆ ತಿರುಗೇಟು ನೀಡಲು ಹೋಗಿ ಭೋಪಾಲದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌, ‘ಗೋಡ್ಸೆ ಒಬ್ಬ ದೇಶ ಭಕ್ತನಾಗಿದ್ದ. ದೇಶಭಕ್ತನಾಗಿಯೇ ಉಳಿಯಲಿದ್ದಾನೆ,’ ಎಂದು ಹೇಳಿದ್ದರು.

ಸಾಧ್ವಿ ಈ ಹೇಳಿಕೆ ನೀಡುತ್ತಲೇ ಟ್ವೀಟ್‌ ಮಾಡಿದ್ದ ಕೇದ್ರ ಸಚಿವ ಅನಂತ್‌ಕುಮಾರ್‌ ಅವರು, ಬದಲಾದ ಪೀಳಿಗೆ ಗೋಡ್ಸೆ ಅವರ ಕುರಿತು ಚರ್ಚಿಸುತ್ತಿರುವುದು ಖುಷಿಯಾಗಿದೆ. ಚರ್ಚೆಯಿಂದ ನಾಥುರಾಂ ಗೋಡ್ಸೆಗೆ ಖುಷಿಯಾಗಿರಬಹುದು ಎಂದಿದ್ದರು. ಹೀಗಿರುವಾಗಲೇ ದಕ್ಷಿಣ ಕನ್ನಡದ ಸಂಸಂದ ನಳೀನ್‌ ಕುಮಾರ್‌ ಕಟೀಲ್‌ ‘ ಗೋಡ್ಸೆ ಕೊಂದಿದ್ದು ಒಬ್ಬರನ್ನು. ಕಸಬ್‌ ಕೊಂದಿದ್ದು 72 ಮಂದಿಯನ್ನು, ರಾಜೀವ್‌ ಗಾಂಧಿ ಕೊಂದದ್ದು 12000 ಜನರನ್ನು. ಯಾರು ಅತಿ ಕ್ರೂರಿ?’ ಎಂದು ವಿವಾದಾತ್ಮಕ ಟ್ವೀಟ್‌ ಮಾಡಿದ್ದರು. ಈ ಸಂಗತಿ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.

ಇದೇ ಹಿನ್ನೆಲೆಯಲ್ಲೇ ಕೈಲಾಶ್‌ ಸತ್ಯಾರ್ಥಿಯವರು ಟ್ವೀಟ್‌ ಮಾಡಿ, ಗೋಡ್ಸೆ ಬೆಂಬಲಿತ ಮನಸ್ಥಿತಿಗಳಿಗೆ ಚಾಟಿ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.