ADVERTISEMENT

ವಿಪಕ್ಷಗಳ ಗದ್ದಲ; ಲೋಕಸಭೆ ಕಲಾಪ ಫೆ. 6ರ ವರೆಗೆ ಮುಂದೂಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2023, 14:21 IST
Last Updated 3 ಫೆಬ್ರುವರಿ 2023, 14:21 IST
   

ನವದೆಹಲಿ: ‘ಅದಾನಿ ಸಮೂಹದ ವಂಚನೆ’ಯ ಹಗರಣದಿಂದಾಗಿ ಹೂಡಿಕೆದಾರ ಎಸ್‌ಬಿಐ ಮತ್ತು ಎಲ್ಐಸಿಗೆ ಆಗಿರುವ ನಷ್ಟದ ಕುರಿತ ಚರ್ಚೆಗೆ ಸರ್ಕಾರ ಅವಕಾಶ ನೀಡದಿರುವುದನ್ನು ವಿರೋಧಿಸಿ ವಿಪಕ್ಷಗಳು ಸಂಸತ್‌ನಲ್ಲಿ ಒಗ್ಗಟ್ಟಿನ ಪ್ರತಿಭಟನೆಯನ್ನು ಎರಡನೇ ದಿನಕ್ಕೆ ಮುಂದುವರಿಸಿದರು. ಇದರಿಂದ ಶುಕ್ರವಾರವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪ ಸುಗಮವಾಗಿ ನಡೆಯಲಿಲ್ಲ. ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲದಿಂದಾಗಿ ಉಭಯ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಅದಾನಿ ಸಮೂಹದ ಹಗರಣಗಳ ಬಗ್ಗೆ ಜಂಟಿ ಸದನ ಸಮಿತಿ (ಜೆಪಿಸಿ) ಇಲ್ಲವೇ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯ ತನಿಖೆಗೆ ಮತ್ತು ತಕ್ಷಣದ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಪ್ರತಿಭಟಿಸಿದರು. ಉಭಯ ಸದನಗಳಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಕಲಾಪ ಆರಂಭದಲ್ಲಿ ಇದೇ ಸನ್ನಿವೇಶ ಮರುಕಳುಸಿತು.

ರಾಜ್ಯಸಭೆಯಲ್ಲಿ ಸಭಾಧ್ಯಕ್ಷ ಜಗದೀಪ್‌ ಧನಕರ್‌ ಅವರು, ಚರ್ಚೆಗೆ ಅವಕಾಶ ಕೋರಿದ್ದ 15 ಸಂಸದರ ನೋಟಿಸ್‌ಗಳನ್ನು ನಿಯಮಾನುಸಾರವಿಲ್ಲವೆಂಬ ಕಾರಣ ನೀಡಿ ತಿರಸ್ಕರಿಸಿದರು. ಇದು ಪ್ರತಿಪಕ್ಷಗಳ ಸಂಸದರ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಆಗ ಕಲಾಪವನ್ನು ಮಧ್ಯಾಹ್ನ 2.30ರವರೆಗೆ ಮುಂದೂಡಿದ ಸಭಾಧ್ಯಕ್ಷರು, ‘ಸಂಸತ್ತು, ಜನರ ಆಶೋತ್ತರಗಳನ್ನು ಸಾಕಾರಗೊಳಿಸಲು ಚರ್ಚಿಸುವ, ಪರಾಮರ್ಶಿಸುವ ಸ್ಥಳವಾಗಿದೆ. ಗದ್ದಲ ಎಬ್ಬಿಸುವ ಸ್ಥಳವಲ್ಲ’ ಎಂದು ಕಟುವಾಗಿ ಹೇಳಿದರು.

ADVERTISEMENT

ಮಧ್ಯಾಹ್ನ ಮತ್ತೆ ಕಲಾಪ ಸೇರಿದಾಗ ಪ್ರತಿಪಕ್ಷಗಳು ತಮ್ಮ ಬೇಡಿಕೆಗೆ ಪಟ್ಟು ಹಿಡಿದರು. ಆಗ ಧನಕರ್‌, ‘ಕಲಾಪಕ್ಕೆ ಅಡ್ಡಿಪಡಿಸಿ ಸಾರ್ವಜನಿಕ ಹಣ ಪೋಲು ಮಾಡುವುದು ದುರದೃಷ್ಟಕರ’ ಎಂದು ಟೀಕಿಸಿದರು.

ಧನಕರ್‌ ಅವರ ಈ ಹೇಳಿಕೆಗಳನ್ನು ಪ್ರತಿಪಕ್ಷಗಳ ಸಂಸದರು ಟೀಕಿಸಿದರು. ಧನಕರ್‌ ಅವರ ಎಚ್ಚರಿಕೆ ಹೊರತಾಗಿಯೂ ಸಭಾಧ್ಯಕ್ಷರ ಪೀಠದ ಮುಂದಿನ ಆವರಣಕ್ಕೆ ಎಎಪಿಯ ಸಂಸದ ಸಂಜಯ್ ಸಿಂಗ್ ಧಾವಿಸಿದರು. ಮತ್ತೆ ಕಲಾಪ ಮುಂದೂಡುವಾಗ ಧನಕರ್‌ ಅವರು, ಸಭಾಧ್ಯಕ್ಷರ ಪೀಠದ ಆವರಣಕ್ಕೆ ಧಾವಿಸುವವರ ಮೇಲೆ ಕ್ರಮದ ಎಚ್ಚರಿಕೆ ನೀಡಿದರು.

ಲೋಕಸಭೆಯಲ್ಲೂ ಇದೇ ರೀತಿ ಪ್ರತಿಪಕ್ಷಗಳ ಸಂಸದರು, ಕಾರ್ಪೊರೇಟ್‌ ದೈತ್ಯ ಅದಾನಿ ಸಮೂಹದ ‘ವಂಚನೆಗಳ’ ವಿರುದ್ಧ ತನಿಖೆಗೆ ಒತ್ತಾಯಿಸಿ, ಪ್ರತಿಭಟಿಸಿದರು. ಕಲಾಪದಲ್ಲಿ ಭಾಗಿಯಾಗುವಂತೆ ಮಾಡಿದ ಮನವಿಗೆ ಪ್ರತಿಭಟನನಿರತ ಸಂಸದರು ಕಿವಿಗೊಡದಿದ್ದಾಗ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನ ಕಲಾಪ ಮತ್ತೆ ಸೇರಿದಾಗಲೂ ಸಂಸದರು ಪ್ರತಿಭಟನೆ ಮುಂದುವರಿಸಿದಾಗ, ಸ್ವೀಕರ್‌ ಪೀಠದಲ್ಲಿದ್ದ ರಾಜೇಂದ್ರ ಅಗರ್‌ವಾಲ್‌ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

‘ಅದಾನಿ ಬಿಕ್ಕಟ್ಟಿಗೂ ಸರ್ಕಾರಕ್ಕೂ ನಂಟಿಲ್ಲ’
ನವದೆಹಲಿ (ರಾಯಿಟರ್ಸ್‌):
‘ಅದಾನಿ ಸಮೂಹದ ಬಿಕ್ಕಟ್ಟಿನ ವಿಷಯಕ್ಕೂ ಮತ್ತು ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ಪ್ರಕಟಿಸಿದ ವರದಿಯ ನಂತರ ಅದಾನಿ ಸಮೂಹದ ಷೇರುಗಳು ಕುಸಿದಿರುವುದೂ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ’ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.