ADVERTISEMENT

ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಈ ಬಾರಿ ಪಾಳಿ ಪದ್ಧತಿ

ಸದಸ್ಯರಿಗೆ ಗ್ಯಾಲರಿಯಲ್ಲೂ ಆಸನ ವ್ಯವಸ್ಥೆ: 31ರಂದು ಆರ್ಥಿಕ ಸಮೀಕ್ಷೆ ಮಂಡನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 11:05 IST
Last Updated 27 ಜನವರಿ 2022, 11:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ಮೊದಲ ಹಂತದಲ್ಲಿ ಸಂಸತ್ತಿನ ಉಭಯ ಸದನಗಳ ಕಲಾಪ ಪಾಳಿ ಪದ್ಧತಿಯಲ್ಲಿ ನಡೆಯಲಿದೆ. ರಾಜ್ಯಸಭೆ ಕಲಾಪ ಬೆಳಗಿನ ಅವಧಿ ಮತ್ತು ಲೋಕಸಭೆಯ ಕಲಾಪ ಮಧ್ಯಾಹ್ನ ನಡೆಯಲಿದೆ.

ಕೋವಿಡ್‌ ಮೂರನೇ ಅಲೆ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಬಜೆಟ್‌ ಅಧಿವೇಶನ ಇದೇ 31ರಂದು ಶುರುವಾಗಲಿದೆ. ಆ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡುವರು.

ಕೋವಿಡ್‌ ಹಿನ್ನೆಲೆಯಲ್ಲಿ ಸದಸ್ಯರ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದೆ. ಜಂಟಿ ಅಧಿವೇಶನ ದಿನ ಮೊದಲ ಬಾರಿಗೆ ಸೆಂಟ್ರಲ್‌ ಸಭಾಂಗಣದ ಜೊತೆಗೆ, ರಾಜ್ಯಸಭೆ, ಲೋಕಸಭೆ ಗ್ಯಾಲರಿಗಳಲ್ಲೂ ಆಸನ ವ್ಯವಸ್ಥೆಯಾಗಿದೆ.

ADVERTISEMENT

ಜ.31ರಂದು ರಾಷ್ಟ್ರಪತಿ ಭಾಷಣದ ಬಳಿಕ ಲೋಕಸಭೆಯು ಅರ್ಧಗಂಟೆ ಕಲಾಪ ನಡೆಸಲಿದ್ದು, ಆರ್ಥಿಕ ಸಮೀಕ್ಷೆ ವರದಿ ಮಂಡನೆಯಾಗಲಿದೆ. ರಾಜ್ಯಸಭೆ ಕಲಾಪ ಮಧ್ಯಾಹ್ನ 2.30ಕ್ಕೆ ಶುರುವಾಗಲಿದ್ದು, ರಾಷ್ಟ್ರಪತಿಗಳ ಭಾಷಣದ ಪ್ರತಿ ಮಂಡಿಸಲಾಗುತ್ತದೆ.

ಫೆಬ್ರುವರಿ 1ರಂದು ಲೋಕಸಭೆ ಕಲಾಪವು ಬೆಳಿಗ್ಗೆ 11 ಗಂಟೆಗೆ ಸೇರಲಿದ್ದು, 2022–23ನೇ ಸಾಲಿನ ಬಜೆಟ್ ಮಂಡನೆಯಾಗಲಿದೆ. ಲೋಕಸಭೆ ಅಧಿವೇಶನದ ಬಳಿಕ ರಾಜ್ಯಸಭೆಯಲ್ಲಿ ಬಜೆಟ್‌ ಪ್ರತಿ ಮಂಡಿಸಲಾಗುತ್ತದೆ.

ಫೆ.2ರಿಂದ ರಾಜ್ಯಸಭೆಯ ಕಲಾಪ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆದರೆ, ಲೋಕಸಭೆಯ ಕಲಾಪವು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ನಡೆಯಲಿದೆ. ಕಲಾಪದ ಅವಧಿಯಲ್ಲಿ ಸದಸ್ಯರಿಗೆ ಗ್ಯಾಲರಿಯಲ್ಲಿಯೂ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ.

ಬಜೆಟ್ ಅಧಿವೇಶನದ ಮೊದಲ ಹಂತದ ಅವಧಿಗಷ್ಟೇ ಈ ಆಸನ ವ್ಯವಸ್ಥೆ ಇರುತ್ತದೆ. ಎರಡನೇ ಹಂತದ ಅಧಿವೇಶನ ಮಾರ್ಚ್‌ 14ಕ್ಕೆ ಆರಂಭವಾಗಲಿದ್ದು, ಪರಿಸ್ಥಿತಿ ಆಧರಿಸಿ ಬದಲಾವಣೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಸ್ಥಿತಿ ನಡುವೆಯೇ ಬಜೆಟ್‌ ಅಧಿವೇಶನ ಸೇರಲಿದೆ. ಅಂಕಿ ಅಂಶಗಳ ಪ್ರಕಾರ, ಜ. 20ರವರೆಗೂ ಸಂಸತ್ತಿನ 875 ಅಧಿಕಾರಿಗಳು, ಸಿಬ್ಬಂದಿಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು. ಪ್ರಸ್ತುತ, ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಅವರಿಗೂ ಕೋವಿಡ್‌ ದೃಢಪಟ್ಟಿದ್ದು, ಪ್ರಸ್ತುತ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಸ್ವಯಂ ಕ್ವಾರಂಟೈನ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.