ADVERTISEMENT

T-Shirts With Slogans: ಸಂಸದರಿಗೆ ಬಟ್ಟೆ ಬದಲಿಸಿಕೊಂಡು ಬರಲು ಸ್ಪೀಕರ್‌‌ ಸೂಚನೆ

ಪಿಟಿಐ
Published 20 ಮಾರ್ಚ್ 2025, 13:11 IST
Last Updated 20 ಮಾರ್ಚ್ 2025, 13:11 IST
<div class="paragraphs"><p>ಘೋಷಣೆಗಳಿರುವ ಟಿ–ಷರ್ಟ್‌ಗಳನ್ನು ಧರಿಸಿರುವ ಡಿಎಂಕೆ ಸಂಸದರು</p></div>

ಘೋಷಣೆಗಳಿರುವ ಟಿ–ಷರ್ಟ್‌ಗಳನ್ನು ಧರಿಸಿರುವ ಡಿಎಂಕೆ ಸಂಸದರು

   

ಪಿಟಿಐ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರ ಮುಂದಿಟ್ಟಿರುವ ಕ್ಷೇತ್ರ ಪುನರ್‌ವಿಂಗಡನೆ ಪ್ರಸ್ತಾವದ ವಿರುದ್ಧ ಧ್ವನಿ ಎತ್ತಿರುವ ಡಿಎಂಕೆ ಸಂಸದರು, ಘೋಷಣೆಗಳಿರುವ ಟಿ–ಷರ್ಟ್‌ಗಳನ್ನು ಧರಿಸಿ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ನಡೆಯನ್ನು ಟೀಕಿಸಿರುವ ಸ್ಪೀಕರ್‌ ಓಂ ಬಿರ್ಲಾ ಅವರು, ಲೋಕಸಭೆ ಕಾರ್ಯವಿಧಾನಕ್ಕೆ ಸಂಬಂಧಿಸಿದ ಸೆಕ್ಷನ್ 349 ಅನ್ನು ಪಾಲಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.

ADVERTISEMENT

ಘೋಷಣೆಗಳಿರುವ ಟಿ–ಷರ್ಟ್‌ಗಳನ್ನು ಧರಿಸಿ ಸದನದ ಕಲಾಪಗಳಲ್ಲಿ ಭಾಗವಹಿಸುವುದನ್ನು ಒಪ್ಪಲಾಗದು ಎಂದಿರುವ ಬಿರ್ಲಾ, ಇದು ಸಂಸದೀಯ ನಿಯಮಗಳು ಮತ್ತು ಶಿಷ್ಟಾಚಾರಕ್ಕೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.

ನಿಯಮ 349 ಅನ್ನು ಉಲ್ಲೇಖಿಸಿದ ಅವರು, 'ಸದನವು ನಿಯಮಗಳು ಮತ್ತು ರೀತಿನೀತಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಸದಸ್ಯರು, ಸದನದ ಘನತೆ ಹಾಗೂ ಗೌರವ ಕಾಪಾಡಬೇಕು. ಆದರೆ, ಕೆಲವು ಸಂಸದರು ನಿಯಮಗಳನ್ನು ಪಾಲಿಸುತ್ತಿಲ್ಲ. ಸದನದ ಘನತೆಯನ್ನು ಉಲ್ಲಂಘಿಸುತ್ತಿದ್ದಾರೆ. ಅದನ್ನು ಒಪ್ಪಲಾಗದು' ಎಂದು ಎಂದಿದ್ದಾರೆ.

ಘೋಷಣೆಗಳಿರುವ ಟಿ–ಷರ್ಟ್‌ಗಳನ್ನು ಧರಿಸಿ ಸದನಕ್ಕೆ ಬಂದಿದ್ದ ಸಂಸದರಿಗೆ, ಹೊರಗೆ ಹೋಗಿ ಸರಿಯಾದ ಬಟ್ಟೆಗಳನ್ನು ಬದಲಿಸಿಕೊಂಡು ಬರುವಂತೆಯೂ ನಿರ್ದೇಶನ ನೀಡಿದ್ದಾರೆ.

ನ್ಯಾಯಯುತ ಕ್ಷೇತ್ರ ಪುನರ್‌ವಿಂಗಡನೆಗೆ ಒತ್ತಾಯಿಸಿ '#FairDelimitation' ಎಂಬ ಟ್ಯಾಗ್‌ ಮತ್ತು 'ತಮಿಳುನಾಡು ಹೋರಾಟ ನಡೆಸುತ್ತದೆ ಮತ್ತು ಜಯ ಸಾಧಿಸಲಿದೆ' ಎಂದು ಟಿ–ಷರ್ಟ್‌ ಮೇಲೆ ಬರೆಯಲಾಗಿದೆ.

ನಿಯಮ 349, ಸಂಸದರು ಸದನದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ವಿವರಣೆ ನೀಡುತ್ತದೆ. ಈ ನಿಯಮದ 16ನೇ ಅಂಶವು, ಸದನ ನಡೆಯುತ್ತಿರುವ ಸಂದರ್ಭದಲ್ಲಿ ಸದಸ್ಯರು ರಾಷ್ಟ್ರಧ್ವಜ ಅಥವಾ ಅದಕ್ಕೆ ಸಂಬಂಧಿಸಿದ ಬ್ಯಾಡ್ಜ್‌ ಹೊರತುಪಡಿಸಿ ಬೇರೆ ಯಾವುದೇ ಧ್ವಜ, ಚಿಹ್ನೆ ಅಥವಾ ವಸ್ತುಗಳನ್ನು ಪ್ರದರ್ಶಿಸಬಾರದು ಎಂದು ಹೇಳುತ್ತದೆ.

ಡಿಎಂಕೆ ಸದಸ್ಯರು ರಾಜ್ಯಸಭೆಯಲ್ಲಿಯೂ ಇದೇ ರೀತಿಯ ಟಿ–ಷರ್ಟ್‌ಗಳನ್ನು ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ, ಎರಡೂ ಸದನಗಳಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ.

ಮೇಲ್ಮನೆಯಲ್ಲಿ ಸಭಾಪತಿ ಜಗದೀಪ್‌ ಧನಕರ್‌ ಅವರು ಯಾವುದೇ ನಿಯಮವನ್ನು ಉಲ್ಲೇಖಿಸಿಲ್ಲ. ಆದರೆ, ಡಿಎಂಕೆ ಸದಸ್ಯರು ಟಿ–ಷರ್ಟ್‌ಗಳನ್ನು ಧರಿಸಿ ಬಂದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.