ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತು ಆಗಸ್ಟ್ 8ರಿಂದ 10ರ ವರೆಗೆ ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ. ಚರ್ಚೆಯ ಕೊನೆಯ ದಿನ ಆಗಸ್ಟ್ 10ರಂದು ಪ್ರಧಾನಿ ಮೋದಿ ಉತ್ತರ ನೀಡುವ ಸಾಧ್ಯತೆ ಇದೆ.
ಮಂಗಳವಾರ ನಡೆದ ಲೋಕಸಭೆಯ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಆದರೆ, ತಾವು ಮಂಡಿಸಿದ ಅವಿಶ್ವಾಸ ನಿರ್ಣಯ ಕುರಿತು ಆದ್ಯತೆ ಮೇಲೆ ಚರ್ಚೆಯನ್ನು ಕೈಗೆತ್ತಿಕೊಳ್ಳದಿರುವುದನ್ನು ಪ್ರತಿಭಟಿಸಿ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳು ಸಮಿತಿ ಸಭೆಯಿಂದ ಹೊರ ನಡೆದವು.
ಸಮಿತಿ ಸಭೆಯಲ್ಲಿ ಮಾತನಾಡಿದ ‘ಇಂಡಿಯಾ’ದ ಅಂಗಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಎಡಪಕ್ಷಗಳು ಮತ್ತು ಟಿಎಂಸಿ ಹಾಗೂ ಬಿಆರ್‌ಎಸ್ ನಾಯಕರು, ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯನ್ನು ಬಿಟ್ಟು ಸರ್ಕಾರವು ಈ ವಾರ ತನ್ನ ಶಾಸಕಾಂಗದ ಕಾರ್ಯಸೂಚಿಯನ್ನೇ ಪ್ರಸ್ತಾಪಿಸುತ್ತಿದೆ ಎಂದು ಟೀಕಿಸಿದರು.
ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸಚೇತಕ ಮಾಣಿಕಂ ಟ್ಯಾಗೋರ್, ‘16ನೇ ಲೋಕಸಭೆ ಅವಧಿಯಲ್ಲಿ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯನ್ನು ಮರು ದಿನವೇ ಕೈಗೆತ್ತಿಕೊಳ್ಳಲಾಗಿತ್ತು. ಈಗ ವಿಳಂಬ ಮಾಡುತ್ತಿರುವುದು ಸರಿಯಲ್ಲ’ ಎಂದರು ಹೇಳಿದರು.
‘ಆಗಸ್ಟ್ 8ರಂದು ಅವಿಶ್ವಾಸ ನಿರ್ಣಯ ಕುರಿತು ಚರ್ಚೆ ಆರಂಭಿಸುವ ತೀರ್ಮಾನಕ್ಕೆ ನಾವು ಒಪ್ಪಿಗೆ ನೀಡಬೇಕು ಎಂಬುದು ಸರ್ಕಾರದ ನಿಲುವಾಗಿತ್ತು. ಇದನ್ನು ಪ್ರತಿಭಟಿಸಿ ಕಲಾಪ ಸಲಹಾ ಸಮಿತಿ ಸಭೆಯಿಂದ ಹೊರನಡೆದೆವು’ ಎಂದು ಡಿಎಂಕೆ ನಾಯಕ ಟಿ.ಆರ್.ಬಾಲು ಹೇಳಿದರು.
ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿರುವ ಪ್ರತಿಪಕ್ಷಗಳು, ಈ ವಿಷಯವಾಗಿ ಈ ಮೊದಲಿನ ನಿದರ್ಶನಗಳನ್ನು ಹಾಗೂ ನಿಯಮಗಳನ್ನು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.