ADVERTISEMENT

ಯಾರ ವಿರುದ್ಧವೂ ಕಾನೂನು ಕ್ರಮಕ್ಕೆ ಅನುಮತಿ ನೀಡಿಲ್ಲ: ಲೋಕಪಾಲ ಕಚೇರಿ

ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ನೀಡಿದ ಉತ್ತರದಲ್ಲಿ ಉಲ್ಲೇಖ

ಪಿಟಿಐ
Published 8 ಮಾರ್ಚ್ 2022, 14:25 IST
Last Updated 8 ಮಾರ್ಚ್ 2022, 14:25 IST
ಲೋಕಪಾಲ
ಲೋಕಪಾಲ   

ನವದೆಹಲಿ: ಲೋಕಪಾಲ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು ಮೂರು ವರ್ಷವಾಗಿದೆ. ಆದರೆ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಯಾರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿಲ್ಲ ಎಂಬುದು ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ಲೋಕಪಾಲ ಕಚೇರಿ ನೀಡಿರುವ ಉತ್ತರದಿಂದ ತಿಳಿದುಬಂದಿದೆ.

‘ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಎಷ್ಟು ಜನ ಅಧಿಕಾರಿಗಳ ವಿರುದ್ಧ ಕಾನೂನುಕ್ರಮ ಜರುಗಿಸಲು ಅನುಮೋದನೆ ನೀಡಲಾಗಿದೆ, ಶಿಫಾರಸು ಅಥವಾ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ವಿವರಗಳನ್ನು ಒದಗಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ, ಎಲ್ಲ ಪ್ರಶ್ನೆಗಳಿಗೂ ‘ಇಲ್ಲ’ ಎಂಬ ಉತ್ತರವನ್ನೇ ನೀಡಲಾಗಿದೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

‘ತನಿಖೆ ನಡೆಸುವ ಅಧಿಕಾರಿಗಳು ಹಾಗೂ ದೂರುಗಳ ಪರಿಶೀಲನೆಗೆ ಇಬ್ಬರು ಹಿರಿಯ ಸಿಬ್ಬಂದಿಯ ನೇಮಕವಾಗಬೇಕಿದೆ. ತನಿಖಾ ನಿರ್ದೇಶಕ ಹಾಗೂ ಪ್ರಾಸಿಕ್ಯೂಷನ್‌ ನಿರ್ದೇಶಕರನ್ನು ನೇಮಕ ಮಾಡಲು ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದೂ ಲೋಕಪಾಲ ಕಚೇರಿ ಉತ್ತರ ನೀಡಿದೆ.

ADVERTISEMENT

ಹಲವು ವರ್ಷಗಳ ಪ್ರತಿಭಟನೆಗಳ ಫಲವಾಗಿ ಕೇಂದ್ರ ಸರ್ಕಾರ 2019ರ ಮಾರ್ಚ್ 27ರಂದು ಲೋಕಪಾಲ ಸಂಸ್ಥೆಯನ್ನು ಅಸ್ವಿತ್ವಕ್ಕೆ ತಂದಿತು.

2021ರ ಏಪ್ರಿಲ್‌ನಿಂದ ಕಳೆದ ಜನವರಿ 31ರ ವರೆಗಿನ ಅವಧಿಯಲ್ಲಿ ಲೋಕಪಾಲ ಸಂಸ್ಥೆಗೆ 4,244 ದೂರುಗಳು ಸಲ್ಲಿಕೆಯಾಗಿವೆ. 2020–21ನೇ ಸಾಲಿಗೆ ಹೋಲಿಸಿದರೆ, ಸಲ್ಲಿಕೆಯಾದ ದೂರುಗಳ ಸಂಖ್ಯೆಯಲ್ಲಿ ಶೇ 80ರಷ್ಟು ಹೆಚ್ಚಳ ಕಂಡುಬಂದಿದೆ.

2019–20ನೇ ಸಾಲಿನಲ್ಲಿ 1,427 ದೂರುಗಳು ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.