ADVERTISEMENT

ಲೋಕಪಾಲ ಸಭೆ: 45 ತಿಂಗಳು ತೆಗೆದುಕೊಂಡ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:12 IST
Last Updated 20 ಡಿಸೆಂಬರ್ 2018, 20:12 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಲೋಕಪಾಲರನ್ನು ಆಯ್ಕೆ ಮಾಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ 45 ತಿಂಗಳ ಬಳಿಕ ಮೊದಲ ಬಾರಿಗೆ ಈ ಮಾರ್ಚ್‌ನಲ್ಲಿ ಸಭೆ ಸೇರಿತ್ತು ಎಂಬುದು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಪಡೆದುಕೊಂಡ ಮಾಹಿತಿಯಿಂದ ಬಹಿರಂಗವಾಗಿದೆ.

ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಲೋಕಪಾಲ ಮಸೂದೆ ಅಂಗೀಕಾರ ಆಗಿತ್ತು. ಅದರ ಬಳಿಕ ಅವರ ನೇತೃತ್ವದಲ್ಲಿ 2014ರ ಫೆಬ್ರುವರಿಯಲ್ಲಿ ಎರಡು ಸಭೆ ನಡೆದಿತ್ತು. ನಂತರ ಸಮಿತಿಯ ಸಭೆ ಈ ವರ್ಷ ಮಾರ್ಚ್‌ನಲ್ಲಿ ನಡೆಯಿತು ಎಂದು ಮಾಹಿತಿ ಹಕ್ಕು ಕಾರ್ಯಕರ್ತೆ ಅಂಜಲಿ ಭಾರದ್ವಾಜ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಶೋಧನಾ ಸಮಿತಿಯು ಅರ್ಹ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಆದರೆ, ಈ ಸಮಿತಿಯ ಸಭೆ ಈವರೆಗೆ ಆಗಿಲ್ಲ ಎಂದು ಮಾಹಿತಿ ನೀಡಲಾಗಿದೆ.

ADVERTISEMENT

‘ಲೋಕಪಾಲ ನೇಮಕದ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಬದ್ಧತೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯು 2013ರಲ್ಲಿ ಅಂಗೀಕಾರ ಆಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಭರವಸೆ ಕೊಟ್ಟು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಲೋಕಪಾಲ ಸಂಸ್ಥೆ ಸ್ಥಾಪನೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಂಜಲಿ ಆರೋಪಿಸಿದ್ದಾರೆ.

ಸಭೆಯ ನಡಾವಳಿ ಬಹಿರಂಗಪಡಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನಿರಾಕರಿಸಿದೆ. 3ರಿಂದ 5 ಉನ್ನತ ವ್ಯಕ್ತಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಈ ಸಭೆಯ ನಡಾವಳಿಯನ್ನು ಬಹಿರಂಗಪಡಿಸುವ ಹಕ್ಕು ತನಗೆ ಇಲ್ಲ ಎಂದು ಇಲಾಖೆ ಹೇಳಿದೆ. ಆದರೆ, ಈ ಮಾಹಿತಿಗೆ ಮಾಹಿತಿ ಹಕ್ಕು ಕಾಯ್ದೆಯು ವಿನಾಯಿತಿ ನೀಡಿರುವ ಬಗ್ಗೆ ಯಾವುದೇ ದಾಖಲೆಯನ್ನು ಇಲಾಖೆ ಕೊಟ್ಟಿಲ್ಲ. ಹಾಗಾಗಿ ನಡಾವಳಿ ಬಹಿರಂಗಪಡಿಸಲು ಇಲಾಖೆ ನಿರಾಕರಿಸಿರುವುದು ಕಾನೂನುಬಾಹಿರ ಎಂದು ಅಂಜಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.