ADVERTISEMENT

ಗಾಂಧೀಜಿ ಬಟ್ಟೆ ನೋಡಿ ಮೋದಿಜಿ: ಪತ್ರಕರ್ತ ರವೀಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 19:48 IST
Last Updated 26 ಜನವರಿ 2020, 19:48 IST
   

ಜೈಪುರ:‘ಬಟ್ಟೆ ನೋಡಿದರೆ ಸಾಕು, ಪ್ರತಿಭಟನಕಾರರು ಯಾರೆನ್ನು ವುದು ತಿಳಿಯುತ್ತದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯು ದೊಡ್ಡ ಕುರ್ಚಿಯಲ್ಲಿ ಕುಳಿತ ವ್ಯಕ್ತಿ ಆಡಿದ ಸಣ್ಣ ಮಾತು’ ಎಂದು ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವೀಶ್‌ ಕುಮಾರ್‌ ಹರಿಹಾಯ್ದರು.

‘ಚಾರ್‌ಬಾಗ್‌’ ವೇದಿಕೆಯಲ್ಲಿ ಭಾನುವಾರ ‘ಬೋಲ್ನಾಹೀ ಹೈ’ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಭಾಂಗಣ ಭರ್ತಿಯಾಗಿ ಸುತ್ತಲೂ ಸಾವಿರಾರು ಯುವಕರು ಜಮಾಯಿಸಿದ್ದರು. ರವೀಶ್‌ ಅವರ ಒಂದೊಂದು ಮಾತಿಗೂ ಕರತಾಡನ ಸದ್ದು ಮಾಡುತ್ತಿತ್ತು.

‘ರಾಮಲೀಲಾ ಮೈದಾನದಲ್ಲಿ ಎಷ್ಟೊಂದು ಸುಳ್ಳುಗಳನ್ನು ಹೇಳಿದಿರಿ. ಅದರ ಕುರಿತು ನಾವು ಮಾತನಾಡುವುದು ಬೇಡವೇ‘ ಎಂದೂ ಪ್ರಶ್ನಿಸಿದರು.

ADVERTISEMENT

‘ದೇಶದ ಅಸ್ಮಿತೆ ಎನಿಸಿರುವ ಹಿಂದೂ, ಮುಸ್ಲಿಂ ಆತ್ಮಗಳಿಗೆ ಧರ್ಮದ ಬಟ್ಟೆ ತೊಡಿಸಿ, ಭಿನ್ನತೆ ಸೃಷ್ಟಿಸುವ ಕೆಲಸ ಮಾಡಬೇಡಿ. ಹಾಗೆ ಬಟ್ಟೆ ನೋಡುವುದೇ ಆಗಿದ್ದರೆ ಸೂಟು–ಬೂಟುಗಳನ್ನು ಬಿಟ್ಟು ಪಂಚೆ ತೊಟ್ಟಿದ್ದ ಗಾಂಧಿ ಚಿತ್ರವನ್ನು ನೋಡಿ’ ಎಂದು ವ್ಯಂಗ್ಯವಾಡಿದರು.

‘ಗಾಂಧಿಯಂತೆಯೇ ಬಟ್ಟೆ ಧರಿಸಿ ಎಂದೇನೂ ನಾನು ಹೇಳುವುದಿಲ್ಲ. ಒಳ್ಳೆಯ ಬಟ್ಟೆಗಳನ್ನೇ ಹಾಕಿ. ಅಷ್ಟೇ ಏಕೆ, ಅಕ್ಷಯಕುಮಾರ್‌ ಹಾಕಿದಂತಹ ಸೂಟುಗಳನ್ನೇ ಧರಿಸಿ. ಆದರೆ, 25 ಲಕ್ಷ ರೂಪಾಯಿ ವ್ಯಯಿಸಿದ ಬಟ್ಟೆ ಧರಿಸುವುದು ಬೇಡ ಎನ್ನುವುದಷ್ಟೇ ನನ್ನ ಸಲಹೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.