ADVERTISEMENT

ಸ್ವಾತಂತ್ಯ ಹೋರಾಟದ ವೇಳೆ ಬೇರೆಯಾಗಿದ್ದ ದಂಪತಿ 72 ವರ್ಷಗಳ ನಂತರ ಭೇಟಿಯಾದರು!

ಪಿಟಿಐ
Published 29 ಡಿಸೆಂಬರ್ 2018, 2:17 IST
Last Updated 29 ಡಿಸೆಂಬರ್ 2018, 2:17 IST
ಶಾರದಾ ಮತ್ತು ನಾರಾಯಣನ್  (ಕೃಪೆ: ದಿ ನ್ಯೂಸ್ ಮಿನಿಟ್)
ಶಾರದಾ ಮತ್ತು ನಾರಾಯಣನ್ (ಕೃಪೆ: ದಿ ನ್ಯೂಸ್ ಮಿನಿಟ್)   

ಕಣ್ಣೂರು (ಕೇರಳ): 1946ರಲ್ಲಿ ಸ್ವಾತಂತ್ಯ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ಜೈಲು ಶಿಕ್ಷೆ ಅನುಭವಿಸಿದ್ದ ಇ.ಕೆ ನಾರಾಯಣನ್ ನಂಬಿಯಾರ್ 72 ವರುಷಗಳ ನಂತರ ತಮ್ಮ ಮೊದಲ ಪತ್ನಿಯನ್ನು ಭೇಟಿಯಾಗಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಕಾವುಂಬಾಯಿ ಗ್ರಾಮದ ನಾರಾಯಣನ್ ನಂಬಿಯಾರ್‌ಗೆ ಈಗ 93 ವರ್ಷ. ಮಡದಿ ಶಾರದಾ ಅವರಿಗೆ 89.

72 ವರುಷಗಳ ನಂತರ ಭೇಟಿಯಾದ ಗಂಡನಲ್ಲಿ ಆಕೆ ಮಾತನಾಡದೆ ಸುಮ್ಮನೆ ಕುಳಿತು, ಕಣ್ಣೀರು ಹಾಕಿದಾಗ, ನೀನು ಯಾಕೆ ಸುಮ್ಮನಿದ್ದೀ? ಯಾಕೆ ಮಾತನಾಡುತ್ತಿಲ್ಲ ಎಂದು ಕೇಳಿದ್ದಾರೆ ನಂಬಿಯಾರ್.
ನನಗೆ ಯಾರ ಮೇಲೂ ಸಿಟ್ಟಿಲ್ಲ ಎಂಬುದಾಗಿತ್ತು ಶಾರದಾ ಅವರ ಉತ್ತರ.

ADVERTISEMENT

ಮದುವೆಯಾದಾಗ ಶಾರದಾಗೆ 13 ಮತ್ತು ನಾರಾಯಣನ್ ಅವರಿಗೆ ವಯಸ್ಸು 17!
ನಾರಾಯಣನ್ ಅವರ ಅಪ್ಪ ತಲಿಯನ್ ರಾಮನ್ ನಂಬಿಯಾರ್ ಕಾವುಂಬಾಯಿ ಚಳುವಳಿಗೆ ನೇತೃತ್ವ ನೀಡಿದವರು. ಮದುವೆಯಾದ10 ತಿಂಗಳಲ್ಲಿಯೇ ನಾರಾಯಣನ್ ಮತ್ತು ಅವರಪ್ಪ ರಾಮನ್ ನಂಬಿಯಾರ್ ಭೂಗತರಾದರು.ಈ ಚಳುವಳಿಯಲ್ಲಿ ಭಾಗಿಯಾಗಿದ್ದಕ್ಕೆ ಎರಡು ತಿಂಗಳ ನಂತರ ಇವರನ್ನುಸೆರೆಹಿಡಿದು ಜೈಲಿಗಟ್ಟಲಾಯಿತು.

ರಾಮನ್ ಮತ್ತು ನಾರಾಯಣನ್ ತಲೆಮರೆಸಿಕೊಂಡಿದ್ದ ಸಮಯದಲ್ಲಿ ಮಲಬಾರ್ ವಿಶೇಷ ಪೊಲೀಸರು ಸಮಯವಲ್ಲದ ಸಮಯಕ್ಕೆ ಬಂದು ಶಾರದಾ ಅವರ ಮನೆಯ ಬಾಗಿಲು ಬಡಿಯುತ್ತಿದ್ದರಿಂದ ಆಕೆ ತಮ್ಮ ತವರು ಮನೆಗೆ ಹೊರಟು ಹೋದರು.
ಇದಾದ ನಂತರ ಆ ಮನೆಗೆ ಕಿಚ್ಚು ಹಚ್ಚಲಾಯಿತು ಎಂದು ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ನಾರಾಯಣನ್ ಅವರ ಅಳಿಯ ಮಧು ಕುಮಾರ್ ಹೇಳಿದ್ದಾರೆ.

ನಾರಾಯಣನ್ ಅವರು ಕಣ್ಣೂರಿನ ಮೂರು ಜೈಲು, ವಿಯ್ಯೂರ್ ಮತ್ತು ಸೇಲಂ ಜೈಲಿನಲ್ಲಿ ಒಟ್ಟು 8 ವರ್ಷಗಳ ಕಾಲ ಬಂಧಿಯಾಗಿದ್ದರು.
1950 ಫೆಬ್ರುವರಿ 11ರಂದು ಸೇಲಂ ಜೈಲಿನಲ್ಲಿ ನಾರಾಯಣನ್ ಅವರ ಅಪ್ಪ ರಾಮನ್ ಅವರನ್ನುಗುಂಡಿಕ್ಕಿ ಕೊಲ್ಲಲಾಯಿತು.ನಾರಾಯಣನ್ ಅವರ ದೇಹಕ್ಕೆ 22 ಶೆಲ್‍ಗಳು ತಾಗಿದ್ದವು. ಅದರಲ್ಲಿ ಮೂರನ್ನು ತೆಗೆಯಲು ಆಗಲಿಲ್ಲ ಎಂದಿದ್ದಾರೆ ಕುಮಾರ್.

ಕೆಲವು ವರ್ಷಗಳ ನಂತರ ಶಾರದಾಬೇರೊಬ್ಬನನ್ನು ಮದುವೆಯಾದರು. ಇತ್ತ 1957ರಲ್ಲಿ ನಾರಾಯಣನ್ ಜೈಲು ಮುಕ್ತರಾಗಿ ಇನ್ನೊಂದು ಮದುವೆಯಾದರು.

ವರ್ಷಗಳು ಕಳೆದವು, ಒಂದು ದಿನ ಶಾರದಾ ಅವರ ಮಗ ಭಾರ್ಗವನ್ ಅಚಾನಕ್ ಆಗಿ ನಾರಾಯಣನ್ ಅವರ ಸಂಬಂಧಿಕನ್ನು ಭೇಟಿಯಾದರು. ಮನೆ, ಮನೆತನದ ಬಗ್ಗೆ ಮಾತನಾಡುತ್ತಿರುವಾಗ ಈ ಎರಡೂ ಕುಟುಂಬಗಳು ಪರಸ್ಪರ ಸಂಬಂಧ ಹೊಂದಿರುವ ವಿಷಯ ಕೃಷಿಕನಾದ ಭಾರ್ಗವನ್‍ಗೆ ತಿಳಿಯಿತು. ಹಾಗಾಗಿ, ತನ್ನ ಅಮ್ಮ ಮತ್ತು ಆಕೆಯ ಮೊದಲ ಪತಿಯನ್ನು ಭೇಟಿ ಮಾಡಿಸಲು ಭಾರ್ಗವನ್ ಮುಂದಾದರು.

ನಾರಾಯಣನ್ ಅವರು ಈಗ ವಿಧುರ.ತನ್ನ ಮೊದಲ ಪತ್ನಿ ಶಾರದಾಳನ್ನು ನೋಡಲಿಕ್ಕಾಗಿ ಅವರು ಪರಶ್ಶಿನಿಕಡವ್‍ನಲ್ಲಿರುವ ಭಾರ್ಗವನ್ ಅವರ ಮನೆಗೆ ಬಂದಿದ್ದರು. ಅವರ ಜತೆಗೆ ಸಂಬಂಧಿಕರೂ ಇದ್ದರು.

ನಾರಾಯಣನ್ ಅವರ ಜತೆ ಮಾತನಾಡಲು ನನ್ನ ಅಮ್ಮ ಹಿಂದೇಟು ಹಾಕಿದರು. ಆಮೇಲೆ ಒತ್ತಾಯಮಾಡಿ ಅವರನ್ನು ಹೊರಗೆ ಕರೆತಂದೆ.ಭೇಟಿ ಮಾಡಿದಾಗ ಇಬ್ಬರೂ ಏನೂ ಮಾತನಾಡಿಲ್ಲ, ಇಬ್ಬರೂ ಭಾವುಕರಾಗಿದ್ದರು ಅಂತಾರೆ ಭಾರ್ಗವನ್.

ಭಾರ್ಗವನ್ ಅವರ ಕುಟುಂಬ ನಾರಾಯಣನ್ ಅವರ ಕುಟುಂಬಕ್ಕಾಗಿ ಸದ್ಯ (ಭೋಜನ) ಏರ್ಪಡಿಸಿದ್ದು, ಎರಡೂ ಕುಟುಂಬಗಳು ಪರಸ್ಪರ ಸಂಪರ್ಕದಲ್ಲಿರಲು ತೀರ್ಮಾನಿಸಿವೆ.

30 ವರ್ಷಗಳ ಹಿಂದೆಯೇ ತಮ್ಮ ಎರಡನೇ ಪತಿಯನ್ನು ಕಳೆದುಕೊಂಡಿದ್ದಾರೆ ಶಾರದಾ.ಈಕೆಯ 6 ಜನ ಮಕ್ಕಳಲ್ಲಿ ನಾಲ್ವರು ಬದುಕುಳಿದಿದ್ದಾರೆ.

ನಾರಾಯಣನ್ ಅವರ ಮೊಮ್ಮಗಳು ಶಾಂತಾ ಕಾವುಂಬಾಯಿ ಅವರು ಕಾವುಂಬಾಯಿ ಚಳುವಳಿ ಬಗ್ಗೆ 'ಡಿಸೆಂಬರ್ 30' ಎಂಬ ಹೆಸರಿನ ಕಾದಂಬರಿ ಬರೆದಿದ್ದಾರೆ.

ಏನಿದು ಕಾವುಂಬಾಯಿ ಚಳವಳಿ?
ಕೇರಳದಲ್ಲಿ ನಡೆದ ರೈತರ ಚಳವಳಿಗಳಲ್ಲಿ ಕಾವುಂಬಾಯಿ ಚಳವಳಿಯೂ ಮಹತ್ತರವಾದುದು. 1946 ಡಿಸೆಂಬರ್ ತಿಂಗಳಲ್ಲಿ ಕಾವುಂಬಾಯಿ ಗ್ರಾಮದ ಜನರು ಪೂನಂ ಕೃಷಿ ಪದ್ದತಿಗಾಗಿ ಬೇಡಿಕೆಯೊಡ್ಡಿದ್ದರು.ಆದರೆ ಇದನ್ನು ವಿರೋಧಿಸಿದ ಭೂ ಮಾಲೀಕರು ಸ್ಥಳಕ್ಕೆ ಪೊಲೀಸರನ್ನು ಕಳುಹಿಸಿದರು.ರೈತರು ಮತ್ತು ಪೊಲೀಸರ ನಡುವಿನ ತರ್ಕದಲ್ಲಿ ಪೊಲೀಸರು ಗುಂಡು ಹಾರಿಸಿದ್ದರು. ಇದರಲ್ಲಿ 5 ರೈತರು ಗುಂಡಿಗೆ ಬಲಿಯಾಗಿದ್ದರು


* ಪೂನಂ ಕೃಷಿ ಪದ್ದತಿ ಪ್ರಕಾರ ಗದ್ದೆಯಲ್ಲಿ ಒಂದು ಬಾರಿ ಕೃಷಿ (ಭತ್ತದ ಕೃಷಿ) ಮಾಡಿದರೆ ನಂತರ ಅದೇ ಭೂಮಿಯಲ್ಲಿ ಕೆಲವು ವರ್ಷಗಳ ಕಾಲ ಬೆಳೆ ಮಾಡುವುದಿಲ್ಲ.ಒಂದು ಬಾರಿ ಫಸಲು ಪಡೆದ ನಂತರ ಕೆಲವು ವರ್ಷ ಆ ಭೂಮಿಯನ್ನು ಹಾಗೆಯೇ ಬಿಡಲಾಗುತ್ತದೆ.ಅಲ್ಲಿ ಬೇರೆ ಸಸ್ಯಗಳು ಬೆಳೆಯಲು ಬಿಡಲಾಗುತ್ತದೆ.ಆಮೇಲೆ ಆ ಸಸ್ಯಗಳನ್ನು ತೆಗೆದು ಕೃಷಿ ಮಾಡಲಾಗುತ್ತದೆ.ಇಲ್ಲಿ ಕೃಷಿ ಭೂಮಿಯನ್ನು ಸಮತಟ್ಟು ಮಾಡುವುದಿಲ್ಲ, ಇದರ ಬದಲಾಗಿ ಕೃಷಿ ಭೂಮಿ ಸುತ್ತಲೂ ಮಣ್ಣಿನ ಕೊರೆತ ತಡೆಯಲು ಬೇರೆ ಮರಗಳನ್ನು ಬೆಳೆಸಲಾಗುತ್ತದೆ.ಸಾಮಾನ್ಯವಾಗಿ ಆದಿವಾಸಿ ಜನರು ಆ ರೀತಿ ಕೃಷಿ ಪದ್ದತಿಯನ್ನು ಅನುಸರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.