ADVERTISEMENT

ಅದಾನಿ ಹಗರಣ ಚರ್ಚೆಗೆ ಬಿಗಿಪಟ್ಟು: ಸಂಸತ್ತಿನ ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

ಪಿಟಿಐ
Published 28 ನವೆಂಬರ್ 2024, 9:24 IST
Last Updated 28 ನವೆಂಬರ್ 2024, 9:24 IST
<div class="paragraphs"><p>ಪ್ರಾತಿನಿಧಿಕ ಚಿತ್ರ ( ಸಂಗ್ರಹ ಚಿತ್ರ)&nbsp;</p></div>

ಪ್ರಾತಿನಿಧಿಕ ಚಿತ್ರ ( ಸಂಗ್ರಹ ಚಿತ್ರ) 

   

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಲಂಚ ಹಗರಣ, ಮಣಿಪುರ ಹಾಗೂ ಸಂಭಾಲ್ ಹಿಂಸಾಚಾರ ಪ್ರಕರಣಗಳನ್ನು ಕೂಡಲೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂಬ ಬಿಗಿಪಟ್ಟನ್ನು ‘ಇಂಡಿಯಾ’ ಮೈತ್ರಿಕೂಟದ ಸಂಸದರು ಗುರುವಾರವೂ ಸಡಿಲಿಸಲಿಲ್ಲ. ಇದರಿಂದಾಗಿ, ಸತತ ಮೂರನೇ ದಿನವೂ ಸಂಸತ್‌ ಕಲಾಪಗಳು ನಡೆಯಲಿಲ್ಲ. 

ಸಂಭಾಲ್‌ನಲ್ಲಿ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಪಕ್ಷದ ಸದಸ್ಯರು ಲೋಕಸಭೆಯಲ್ಲಿ ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಿ ಘೋಷಣೆಗಳನ್ನು ಕೂಗಿದರು. 

ADVERTISEMENT

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರತಿಭಟನೆಯನ್ನು ಖಂಡಿಸಿದರು, ‘ಸದನದ ಕಲಾಪಕ್ಕೆ ಅಡ್ಡಿಪಡಿಸುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಪ್ರಯತ್ನಗಳನ್ನು ನಾನು ಖಂಡಿಸುತ್ತೇನೆ’ ಎಂದು ಅವರು ಹೇಳಿದರು.

ಆದರೆ, ಪ್ರತಿಪಕ್ಷಗಳ ಗದ್ದಲ ಮುಂದುವರಿದಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು. 

ರಾಜ್ಯಸಭೆಯಲ್ಲಿಯೂ ವಿರೋಧ ಪಕ್ಷದ ಸದಸ್ಯರ ಗದ್ದಲದಿಂದಾಗಿ ರಾಜ್ಯಸಭೆಯ ಕಲಾಪ ಮೂರನೇ ದಿನವೂ ರದ್ದಾಯಿತು. 

ಕಲಾಪ ನಡೆಸಲು ಸಹಕಾರ ನೀಡುವಂತೆ ಸಭಾಪತಿ ಜಗದೀಪ ಧನಕರ್ ಅವರು ವಿಪಕ್ಷ ಸದಸ್ಯರಿಗೆ ಮನವಿ ಮಾಡಿದರು. ಅವರ ಮನವಿಗೆ ವಿಪಕ್ಷ ಸದಸ್ಯರು ಕಿವಿಗೊಡಲಿಲ್ಲ. ಮೂರು ವಿಷಯಗಳ ಚರ್ಚೆಗೆ ಆಗ್ರಹಿಸಿ ಗದ್ದಲ ಮುಂದುವರಿಸಿದರು. ‘ಕಲಾಪಕ್ಕೆ ಅಡ್ಡಿಪಡಿಸುವುದು ಪರಿಹಾರ ಅಲ್ಲ, ಇದೊಂದು ರೋಗ. ಇದು ನಮ್ಮ ಅಡಿಪಾಯವನ್ನು ದುರ್ಬಲಗೊಳಿಸುತ್ತದೆ. ಇಂತಹ ಧೋರಣೆ ಸರಿಯಲ್ಲ. ಸಂಸದರು ಅರ್ಥಪೂರ್ಣ ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಧನಕರ್‌ ಸಲಹೆ ನೀಡಿದರು.

ಅದಾನಿ ಲಂಚ ಪ್ರಕರಣ, ಮಣಿಪುರ ಹಾಗೂ ಸಂಭಾಲ್‌ ಹಿಂಸಾಚಾರ ‍ಪ್ರಕರಣಗಳ ಚರ್ಚೆಗೆ ಒತ್ತಾಯಿಸಿ ವಿಪಕ್ಷ ಸದಸ್ಯರು ನೀಡಿದ ನೋಟಿಸ್‌ಗಳನ್ನು ಸಭಾಪತಿ ತಿರಸ್ಕರಿಸಿದರು. ಬಳಿಕ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. 

ಕಾಂಗ್ರೆಸ್ ಸಂಸದ ರವೀಂದ್ರ ಚವಾಣ್ ಅವರು ಸಹ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.