ಶುಭಾಂಶು ಶುಕ್ಲಾ
ಲಖನೌ: ಆ್ಯಕ್ಸಿಯಂ–4 ಯೋಜನೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್) ಪಯಣಿಸಿ, ಯಶಸ್ವಿಯಾಗಿ ಹಿಂದಿರುಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಭಾರತಕ್ಕೆ ಭಾನುವಾರ ಮರಳಲಿದ್ದಾರೆ. ಶುಭಾಂಶು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಹುಟ್ಟೂರು ಲಖನೌನಲ್ಲಿ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ.
ಭಾನುವಾರ ಭಾರತಕ್ಕೆ ಮರಳಲಿರುವ ಶುಭಾಂಶು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಭೇಟಿಯಾಗುವ ನಿರೀಕ್ಷೆ ಇದೆ. ಬಳಿಕ ಆಗಸ್ಟ್ 25ರಂದು ಲಖನೌಗೆ ಭೇಟಿ ನೀಡಲಿದ್ದಾರೆ.
ಈ ವೇಳೆ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಲಖೌನದಲ್ಲಿ ಶುಭಾಂಶು ವ್ಯಾಸಂಗ ಮಾಡಿದ ಸಿಟಿ ಮಾಂಟೆಸ್ಸರಿ ಸ್ಕೂಲ್‌ನ (ಸಿಎಂಎಸ್) ಗೆಳಯರು ಹಾಗೂ ಶಾಲಾ ಆಡಳಿತ ಸಜ್ಜಾಗಿದೆ.
ಶುಭಾಂಶು ಅವರನ್ನು ಮೆರವಣಿಗೆ ಮೂಲಕ ಕರೆತರಲು ಸಿದ್ದತೆ ನಡೆದಿದ್ದು, ಎಲ್ಲಾ ರಸ್ತೆಗಳಲ್ಲೂ ಧ್ವಜವನ್ನು ಹಾರಿಸುತ್ತಾ ಅವರನ್ನು ಸ್ವಾಗತಿಸಲು ಜನರಿಗೆ ಶಾಲಾ ಆಡಳಿತ ಕರೆ ನೀಡಿದೆ.
ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು, ಗಣ್ಯರು ಶುಭಾಂಶು ಅವರಿಗೆ ಸ್ವಾಗತ ಕೋರಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನೂ ಆಹ್ವಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶಾಲೆಯ ಸಂವಹನ ವಿಭಾಗದ ಮುಖ್ಯಸ್ಥರಾದ ರಿಶಿ ಖನ್ನಾ ಹೇಳಿದ್ದಾರೆ.
ಜೂನ್ 25ರಂದು ಬಾಹ್ಯಾಕಾಶ ನಿಲ್ದಾಣದ ಪಯಣ ಕೈಗೊಂಡಿದ್ದ ಶುಕ್ಲಾ, ಜೂನ್ 26ರಂದು ಐಎಸ್‌ಎಸ್ ತಲುಪಿದ್ದರು. ಜುಲೈ 15ರಂದು ಭೂಮಿಗೆ ಹಿಂದಿರುಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.