ADVERTISEMENT

ಉತ್ತರ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; 12 ಮಂದಿಯ ರಕ್ಷಣೆ

ಪಿಟಿಐ
Published 25 ಜನವರಿ 2023, 2:01 IST
Last Updated 25 ಜನವರಿ 2023, 2:01 IST
ಲಖನೌದಲ್ಲಿ ಬಹುಮಹಡಿ ಕಟ್ಟಡ ಕುಸಿತ - ರಕ್ಷಣಾ ಕಾರ್ಯಾಚರಣೆ
ಲಖನೌದಲ್ಲಿ ಬಹುಮಹಡಿ ಕಟ್ಟಡ ಕುಸಿತ - ರಕ್ಷಣಾ ಕಾರ್ಯಾಚರಣೆ   

ಲಖನೌ: ಉತ್ತರ ಪ್ರದೇಶದಲ್ಲಿ ಲಖನೌದ ಹಜರತ್‌ಗಂಜ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಬಿದ್ದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಐದರಿಂದ ಏಳು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆಮ್ಲಜನಕ ಪೂರೈಕೆಗೂ ವ್ಯವಸ್ಥೆ ಮಾಡಲಾಗಿದೆ.

ಸೇನೆಯ ತಂಡ ಕೂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ 12 ಗಂಟೆಗಳ ಕಾಲ ಮುಂದುವರಿಯಲಿದೆ ಎಂದು ಡಿಜಿಪಿ ಡಿ.ಎಸ್. ಚೌಹಾನ್ ಮಾಹಿತಿ ನೀಡಿದ್ದಾರೆ.

ADVERTISEMENT

ಈವರೆಗೆ 12 ಮಂದಿಯನ್ನು ರಕ್ಷಿಸಲಾಗಿದೆ. ಇದು ಸಂಯಮ ಕಾಪಾಡುವ ಸಮಯ. ವೈಜ್ಞಾನಿಕವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಎಲ್ಲರನ್ನು ರಕ್ಷಿಸುವ ನಂಬಿಕೆ ಇದೆ ಎಂದು ಅವರು ಹೇಳಿದರು.

ಕಟ್ಟಡ ಕುಸಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತಜ್ಞರ ಹಾಗೂ ಪೊಲೀಸರ ತನಿಖೆಯ ಬಳಿಕವಷ್ಟೇ ಈ ಬಗ್ಗೆ ತಿಳಿದು ಬರಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಹ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಣಾ ಕಾರ್ಯಾಚರಣೆಗೆ ಮೇಲ್ನೋಟ ವಹಿಸುತ್ತಿದ್ದು, ಸೇನಾ ತಂಡ ಸಹ ಆಗಮಿಸಿದೆ ಎಂದು ಜಿಲ್ಲಾಧಿಕಾರಿ ಸೂರ್ಯಪಾಲ್ ಗಂಗಾವರ್ ಹೇಳಿದರು.

ಮಂಗಳವಾರ ಸಂಭವಿಸಿದ ಭೂಕಂಪದಿಂದಾಗಿ ಕಟ್ಟಡ ಕುಸಿದಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗ ಕಾರಣಗಳ ಬಗ್ಗೆ ಚರ್ಚಿಸಲು ಸೂಕ್ತವಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದಷ್ಟೇ ತಿಳಿಸಿದರು.

ಈ ಮೊದಲು ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್‌ ಪಾಠಕ್‌ ಹೇಳಿದ್ದರು. ಬಳಿಕ ತಮ್ಮ ಹೇಳಿಕೆ ಹಿಂಪಡೆದ ಅವರು, ಯಾರೂ ಕೂಡ ಮೃತಪಟ್ಟಿಲ್ಲ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.