ನವದೆಹಲಿ: ರಾಜ್ಯಸಭೆಯ 12 ಸದಸ್ಯರ ಅಮಾನತು ಖಂಡಿಸಿ, ವಿರೋಧ ಪಕ್ಷಗಳ ಸದಸ್ಯರು ಸಂಸತ್ ಭವನದ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆಯ ಮುಂದೆ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ. ಇದಕ್ಕೆ ಪ್ರತಿಯಾಗಿ ರಾಜ್ಯಸಭೆಯ ಬಿಜೆಪಿ ಸದಸ್ಯರು ಕೂಡ ಗಾಂಧಿ ಪ್ರತಿಮೆ ಬಳಿಯೇ ಪ್ರತಿಭಟನೆ ಕೈಗೊಂಡಿದ್ದಾರೆ.
ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿದರು.
ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು, ಸುಗಮ ಕಲಾಪಕ್ಕಾಗಿ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಸಮನ್ವಯತೆ ಅಗತ್ಯವಿದೆ. ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸುಗಮ ಕಲಾಪ ನಡೆಯುವಂತೆ ಮಾಡಲು ವಿರೋಧ ಪಕ್ಷದ ನಾಯಕರು ಮತ್ತು ಇತರೆ ನಾಯಕರು ಒಟ್ಟಾಗಬೇಕು ಎಂದು ಮನವಿ ಮಾಡಿದರು.
'ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದ ಬಗ್ಗೆ ಮಾಹಿತಿ ನೀಡುವಂತೆ ನಾವು ಎಲ್ಲ ರಾಜ್ಯಗಳಿಗೂ ಕೇಳಿದ್ದೆವು. ಈ ಪೈಕಿ 19 ರಾಜ್ಯಗಳು ಪ್ರತಿಕ್ರಿಯಿಸಿವೆ. ಇದರಲ್ಲಿ ಪಂಜಾಬ್‌ನಲ್ಲಿ ಮಾತ್ರ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದ ಶಂಕಿತ ಪ್ರಕರಣಗಳು ವರದಿಯಾಗಿವೆ' ಎಂದು ಕೇಂದ್ರ ಸಚಿವ ಮನ್‌ಸುಖ್ ಮಾಂಡವಿಯಾ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ‘ಅಶಿಸ್ತಿನ ನಡವಳಿಕೆ’ ತೋರಿದ್ದ ಆರೋಪದಲ್ಲಿ ವಿರೋಧ ಪಕ್ಷಗಳ 12 ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಿ ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಆದೇಶಿಸಿದ್ದರು. ಆದರೆ, ನಿಯಮಗಳು ಮತ್ತು ಪೂರ್ವ ನಿದರ್ಶನಗಳನ್ನು ಉಲ್ಲಂಘಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.