ADVERTISEMENT

ಮಧ್ಯಪ್ರದೇಶ ಸಂಪುಟ ವಿಸ್ತರಣೆ: ಹೊಸದಾಗಿ 28 ಮಂದಿ ಸೇರ್ಪಡೆ

ಪಿಟಿಐ
Published 2 ಜುಲೈ 2020, 8:20 IST
Last Updated 2 ಜುಲೈ 2020, 8:20 IST
ಗುರುವಾರ ನಡೆದ ಮಧ್ಯಪ್ರದೇಶ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಮಾರಂಭಕ್ಕೆ ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬರುತ್ತಿರುವುದು
ಗುರುವಾರ ನಡೆದ ಮಧ್ಯಪ್ರದೇಶ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಮಾರಂಭಕ್ಕೆ ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬರುತ್ತಿರುವುದು   

ಭೋಪಾಲ್‌: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಹೊಸದಾಗಿ 28 ಮಂದಿಗೆ ಸಚಿವ ಸ್ಥಾನ ನೀಡುವ ಮೂಲಕಸಂಪುಟ ವಿಸ್ತರಿಸಿದ್ದಾರೆ. ಹೊಸದಾಗಿ ಸಂಪುಟ ಸೇರಿದವರಲ್ಲಿ ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ನಿಷ್ಠರಾಗಿರುವ 12 ಶಾಸಕರೂ ಸೇರಿದ್ದಾರೆ.

ಒಟ್ಟು 22 ಶಾಸಕರು ಈ ವರ್ಷದ ಮಾರ್ಚ್‌ನಲ್ಲಿ ಕಾಂಗ್ರೆಸ್‍ ಪಕ್ಷ ತೊರೆದಿದ್ದರು. ಈ ಬೆಳವಣಿಗೆ ನಂತರ ರಾಜ್ಯದಲ್ಲಿ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು. ಕಾಂಗ್ರೆಸ್‌ನಿಂದ ಬಂಡಾಯ ಎದ್ದಿದ್ದವರ ಪೈಕಿ ಪ್ರಮಖರಾಗಿದ್ದ ಯಶೋಧರಾ ರಾಜೇ ಸಿಂಧಿಯಾ ಮತ್ತು ಗೋಪಾಲ ಭಾರ್ಗವ ಅವರೂ ಗುರುವಾರ ಸಂಪುಟ ಸೇರಿದ್ದಾರೆ.

ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಕೋವಿಡ್‍-19 ಶಿಷ್ಟಾಚಾರಕ್ಕೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೊಸದಾಗಿ 20 ಮಂದಿ ಸಂಪುಟ ದರ್ಜೆ ಸಚಿವರಾಗಿ ಮತ್ತು 8 ಮಂದಿ ರಾಜ್ಯ ಸಚಿವರಾಗಿ ಸಂಪುಟ ಸೇರಿದರು.

ADVERTISEMENT

ಮಾರ್ಚ್ 23ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಚೌಹಾಣ್‍ ಅವರು ಏಪ್ರಿಲ್ 21ರಂದು ಐವರನ್ನು ಸೇರಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಸಂಪುಟ ವಿಸ್ತರಿಸಿದ್ದರು. ಆಗ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿದ್ದ ತುಳಸಿ ಸಿಲಾವತ್ ಮತ್ತು ಗೋವಿಂದ ಸಿಂಗ್ ರಾಜಪೂತ್‍ ಸಂಪುಟದಲ್ಲಿ ಸ್ಥಾನ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.