ಭೋಪಾಲ್:ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹೆಣ್ಣುಮಕ್ಕಳ ರಾಷ್ಟ್ರೀಯ ದಿನದ ಅಂಗವಾಗಿ ಹೆಣ್ಣುಮಕ್ಕಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ‘PANKH’ (ಪಂಖ್/ರೆಕ್ಕೆ) ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿದರು.
ನಗರದಮಿಂಟೊ ಸಭಾಂಗಣದಲ್ಲಿನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಅಡಿಯಲ್ಲಿ ನಾವು PANKH ಅಭಿಯಾನ ಆರಂಭಿಸಿದ್ದೇವೆ. ಇದರಲ್ಲಿ ‘P’ ಎಂದರೆ ರಕ್ಷಣೆ (ಪ್ರೊಟೆಕ್ಷನ್), ‘A’ ಎಂದರೆ ಹೆಣ್ಣು ಮಕ್ಕಳ ಹಕ್ಕುಗಳ ಬಗೆಗಿನ ಜಾಗೃತಿ (ಅವೇರ್‌ನೆಸ್), ‘N’ ಎಂದರೆ ಪೋಷಣೆ (ನ್ಯೂಟ್ರಿಷನ್ ), ‘K’ ಎಂದರೆ ಜ್ಞಾನ (ನಾಲೆಡ್ಜ್) ಮತ್ತು ‘H’ ಎಂದರೆ ಆರೋಗ್ಯ (ಹೆಲ್ತ್) ಎಂದರ್ಥ. ಹೀಗಾಗಿ ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸಲಿದ್ದಾರೆ. ಈ ಅಭಿಯಾನವು ವರ್ಷದುದ್ದಕ್ಕೂ ಮುಂದುವರಿಯಲಿದೆ’ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ‘ಲಾಡ್ಲಿ ಲಕ್ಷ್ಮಿ ಯೋಜನೆ’ ಅಡಿಯಲ್ಲಿ ಸುಮಾರು 26,099 ವಿದ್ಯಾರ್ಥಿನಿಯರಿಗೆ ರೂ. 6.47 ಕೋಟಿ ಮೊತ್ತದ ವಿದ್ಯಾರ್ಥಿ ವೇತನ ಘೋಷಿಸಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿನಿಯರೊಂದಿಗೆ ಸಂವಹನ ನಡೆಸಿದ ಚೌಹಾಣ್, ‘ನಾನು ಶಾಸಕನಾದಾಗ, ಬಡ ಕುಟುಂಬದ ಹೆಣ್ಣು ಮಕ್ಕಳನ್ನು ಹೊರೆ ಎಂದು ಭಾವಿಸದಂತೆ ಅವರ ವಿವಾಹಕ್ಕೆ ನೆರವಾಗುವ ಯೋಜನೆ ರೂಪಿಸಿದ್ದೆ. ಮುಖ್ಯಮಂತ್ರಿಯಾದಾಗ ಹೆಣ್ಣುಮಕ್ಕಳನ್ನು ಹೊರೆಯ ಬದಲು ವರವೆಂದು ಪರಿಗಣಿಸಬೇಕೆಂದು ಬಯಸಿ ಲಾಡ್ಲಿ ಲಕ್ಷ್ಮಿ ಯೋಜನೆ ಜಾರಿಗೆ ತಂದೆವು’ ಎಂದೂ ಹೇಳಿದರು.
ಚೌಹಾಣ್ ತಮ್ಮ ಭಾಷಣದ ಬಳಿಕ ‘ಪ್ರಧಾನ ಮಂತ್ರಿ ಮಾತೃ ಯೋಜನೆ’ ಫಲಾನುಭವಿಗಳಿಗೆ ನೆರವು ವಿತರಿಸಿದರು. ಜೊತೆಗೆ 501 ಅಂಗನವಾಡಿ ಕಟ್ಟಡಗಳನ್ನೂ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.