ಭಿಂಡ್(ಮಧ್ಯಪ್ರದೇಶ): ಜಿಲ್ಲೆಯಲ್ಲಿ ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿ, ಬಲವಂತದಿಂದ ಅವರಿಗೆ ಎರಡು ಬಾರಿ ಮೂತ್ರ ಕುಡಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋನು ಬರುವಾ, ಅಲೋಕ್ ಶರ್ಮಾ ಹಾಗೂ ಛೋಟು ಓಝಾ ಬಂಧಿತ ಆರೋಪಿಗಳು. ಎಸ್‌ಸಿ, ಎಸ್‌ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ ಸಂಜೀವ್ ಪಾಠಕ್ ತಿಳಿಸಿದ್ದಾರೆ.
‘ಸಂತ್ರಸ್ತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತ ವ್ಯಕ್ತಿಯು ಮುಖ್ಯ ಆರೋಪಿಯ ವಾಹನ ಚಾಲಕನಾಗಿದ್ದ. ಕೆಲಸ ಬಿಟ್ಟಿದ್ದಕ್ಕಾಗಿ ಆತನನ್ನು ಗುರಿಯಾಗಿಸಿ ಹಲ್ಲೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ’ ಎಂದು ತಿಳಿಸಿದ್ದಾರೆ.
‘ಗ್ವಾಲಿಯರ್‌ನಲ್ಲಿನ ನನ್ನ ಮಾವನ ಮನೆಯಿಂದ ಅಪಹರಣ ಮಾಡಿ, ಭಿಂಡ್‌ಗೆ ಕರೆತಂದರು. ನನ್ನನ್ನು ಪ್ಲಾಸ್ಟಿಕ್ ಪೈಪ್‌ನಿಂದ ಥಳಿಸಿದ ಆರೋಪಿಗಳು, ದಾರಿ ಮಧ್ಯೆ ವಾಹನ ನಿಲ್ಲಿಸಿದರು. ನಂತರ, ಬಾಟಲಿಯೊಂದರಲ್ಲಿದ್ದ ಮೂತ್ರವನ್ನು ಬಲವಂತದಿಂದ ಕುಡಿಸಿದರು’ ಎಂದು ಸಂತ್ರಸ್ತ ತಿಳಿಸಿದ್ದಾರೆ.
‘ಬಳಿಕ, ನನ್ನನ್ನು ಅಕುತ್ಪುರ ಗ್ರಾಮಕ್ಕೆ ಕರೆದೊಯ್ದು, ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ, ಮತ್ತೊಮ್ಮೆ ಮೂತ್ರ ಕುಡಿಸಿದರು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.