
ನವದೆಹಲಿ: ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 60ರಿಂದ 61 ವರ್ಷಕ್ಕೆ ಹೆಚ್ಚಿಸಿ ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಪ್ರಸನ್ನ ಬಿ. ವರಾಳೆ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಮಧ್ಯಂತರ ಆದೇಶದಲ್ಲಿ, ತೆಲಂಗಾಣ ಹೈಕೋರ್ಟ್ ತೆಗೆದುಕೊಂಡ ಇದೇ ರೀತಿಯ ನಿರ್ಧಾರವನ್ನು ಉಲ್ಲೇಖಿಸಿದೆ. ‘ರಾಜ್ಯ ಸರ್ಕಾರವು ಪರಿಹಾರ ನೀಡಲು ಸಿದ್ಧರಿರುವಾಗ ನ್ಯಾಯಾಂಗ ಅಧಿಕಾರಿಗಳಿಗೆ ಅದನ್ನು ಏಕೆ ನಿರಾಕರಿಸಬೇಕು’ ಎಂದು ಕೇಳಿದೆ.
‘ನ್ಯಾಯಾಂಗ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಇತರ ನೌಕರರು ಒಂದೇ ಬೊಕ್ಕಸದಿಂದ ಸಂಬಳ ಪಡೆಯುತ್ತಾರೆ. ಇತರ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 62 ವರ್ಷ ಇದೆ. ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸಿನ ನಡುವೆ ಒಂದು ವರ್ಷದ ವ್ಯತ್ಯಾಸವಿದೆ’ ಎಂದು ಹೇಳಿದೆ.
ಹೈಕೋರ್ಟ್ ನ್ಯಾಯಮೂರ್ತಿಗಳು 62ನೇ ವಯಸ್ಸಿಗೆ ನಿವೃತ್ತರಾಗುತ್ತಾರೆ. ಈಗ ಮಧ್ಯಪ್ರದೇಶದಲ್ಲಿ ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರ ನಿವೃತ್ತಿ ವಯಸ್ಸು 61ಕ್ಕೆ ಏರಿಕೆಯಾಗಿದೆ.
ನಾಲ್ಕು ವಾರಗಳ ನಂತರ ಅಂತಿಮ ವಿಚಾರಣೆ ನಡೆಸುವುದಾಗಿ ಹೇಳಿದ ಪೀಠವು, ಅರ್ಜಿ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.