ADVERTISEMENT

ಮಧ್ಯಪ್ರದೇಶ: ತ್ರಿವಳಿ ತಲಾಖ್‌ ನೀಡಿದ ವ್ಯಕ್ತಿ ಬಂಧನ

ಏಜೆನ್ಸೀಸ್
Published 25 ಅಕ್ಟೋಬರ್ 2018, 2:56 IST
Last Updated 25 ಅಕ್ಟೋಬರ್ 2018, 2:56 IST
   

ಭೋಪಾಲ್‌: ವ್ಯಕ್ತಿಯೊಬ್ಬ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪ್ರಕರಣ ಮಧ್ಯಪ್ರದೇಶದಲ್ಲಿ ವರದಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.ತ್ರಿವಳಿ ತಲಾಖ್‌ ನಿಷೇಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತ ಕೇವಲ ಒಂದು ತಿಂಗಳಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಕಾಯ್ದೆಯ ಅಡಿಯಲ್ಲಿ ಆರಿಫ್‌ ಹುಸ್ಸೇನ್‌ ಎಂಬಾತನ ವಿರುದ್ಧ ಜಬುವಾ ಜಿಲ್ಲೆಯ ಮೇಘ್‌ನಗರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ಮಾತನಾಡಿರುವ ಠಾಣಾಧಿಕಾರಿ ಕುಶಾಲ್‌ ಸಿಂಗ್‌ ರಾವತ್‌, ‘ಸಲ್ಮಾ ಬಾನು ಅವರು 10 ವರ್ಷಗಳ ಹಿಂದೆ ಆರಿಫ್‌ ಹುಸ್ಸೇನ್‌ ಎಂಬಾತನನ್ನು ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ.ಸಲ್ಮಾ ನೀಡಿದ ದೂರಿನ ಅನ್ವಯ ಆರಿಫ್‌ನನ್ನು ಬಂಧಿಸಿ ಸೆಕ್ಷನ್‌ 323, 498 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ADVERTISEMENT

‘ನಾನು ದಪ್ಪವಿದ್ದ ಕಾರಣ ನನ್ನ ಗಂಡ ನನ್ನೊಡನೆ ಅನುಚಿತವಾಗಿ ವರ್ತಿಸುತ್ತಿದ್ದರು. ನಿರಂತರವಾಗಿ ಹಲ್ಲೆ ನಡೆಸುತ್ತಿದ್ದರು. ಆದರೂ ನನಗೆ ತಲಾಖ್‌ ನೀಡಿದ ನಂತರವಷ್ಟೇ ಆತನ ವಿರುದ್ಧ ದೂರು ದಾಖಲಿಸಿದೆ’ ಎಂದು ಸಲ್ಮಾ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.