ADVERTISEMENT

ಗೋಹತ್ಯೆ ಆರೋಪ: ಮಧ್ಯಪ್ರದೇಶದಲ್ಲಿ ಇಬ್ಬರು ಬುಡಕಟ್ಟು ವ್ಯಕ್ತಿಗಳ ಹತ್ಯೆ

ಪಿಟಿಐ
Published 3 ಮೇ 2022, 14:42 IST
Last Updated 3 ಮೇ 2022, 14:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಿವನಿ (ಮಧ್ಯಪ್ರದೇಶ): ಇಲ್ಲಿನ ಸಿಮರಿಯಾ ಗ್ರಾಮದಲ್ಲಿ ಗೋಹತ್ಯೆ ಮಾಡಿರುವ ಆರೋಪದಲ್ಲಿ ಇಬ್ಬರು ಬುಡಕಟ್ಟು ವ್ಯಕ್ತಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಹಲ್ಲೆ ವೇಳೆ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ದಾಳಿ ನಡೆಸಿದವರು ಬಜರಂಗ ದಳದ ಕಾರ್ಯಕರ್ತರು ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಆರೋಪಿಸಿದೆ.

ಘಟನೆ ಸೋಮವಾರ ನಡೆದಿದ್ದು, ಈ ಸಂಬಂಧ 20 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಲ್ಲಿ ಆರು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘15ರಿಂದ 20 ಜನರಿದ್ದ ಗುಂಪು ಬುಡಕಟ್ಟು ವ್ಯಕ್ತಿಗಳ ಮನೆಗೆ ತೆರಳಿ ಹಲ್ಲೆ ನಡೆಸಿದೆ. ಇವರಲ್ಲಿ ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಕೆ. ಮರವಿ ತಿಳಿಸಿದ್ದಾರೆ.

‘ಕೆಲವು ಆರೋಪಿಗಳ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೂವರು ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಮೃತರ ಮನೆಯಲ್ಲಿ 12 ಕೆ.ಜಿ. ‌ಮಾಂಸ ಪತ್ತೆಯಾಗಿದೆ’ ಎಂದಿದ್ದಾರೆ.

‘ಗುಂಪು ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿದೆ. ತಡೆಯಲು ಹೋದಾಗ ನನ್ನ ಮೇಲೂ ಹಲ್ಲೆ ನಡೆಸಿದೆ’ ಎಂದು ಗಾಯಾಳು ಹಾಗೂ ದೂರುದಾರ ಬ್ರಜೇಶ್‌ ಬಟ್ಟಿ ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಜಬಲ್‌ಪುರ–ನಾಗಪುರ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.