ADVERTISEMENT

ಮಧ್ಯಪ್ರದೇಶ: ಜಾನುವಾರುಗಳಿಗಾಗಿ ಚಾಕೋಲೆಟ್‌ ಅಭಿವೃದ್ಧಿ

ಕ್ಷೀರೋತ್ಪಾದನೆ ವೃದ್ಧಿ ಗುರಿ * ಮೇವಿಗೆ ಪರ್ಯಾಯವಾಗಿ ಬಳಕೆ

ಪಿಟಿಐ
Published 15 ಅಕ್ಟೋಬರ್ 2021, 13:02 IST
Last Updated 15 ಅಕ್ಟೋಬರ್ 2021, 13:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಜಬಲ್‌ಪುರ, ಮಧ್ಯಪ್ರದೇಶ: ಕ್ಷೀರೋತ್ಪಾದನೆ ವೃದ್ಧಿಸುವ ಗುರಿಯೊಂದಿಗೆ ಸ್ಥಳೀಯ ವಿಶ್ವವಿದ್ಯಾಲಯ ಜಾನುವಾರುಗಳಿಗೆ ಮೇವಿಗೆ ಪರ್ಯಾಯವಾಗಿ ನೀಡಲು ಚಾಕೋಲೆಟ್‌ ಅಭಿವೃದ್ಧಿಪಡಿಸಿದೆ. ಇದು, ಹಾಲಿನ ಉತ್ಪಾದನೆ ಹೆಚ್ಚಿಸುವ ಜೊತೆಗೆ ಜಾನುವಾರುಗಳ ಸಂತತಿ ವೃದ್ಧಿಗೂ ನೆರವಾಗಲಿದೆ ಎಂದು ವಿ.ವಿ ಅಧಿಕಾರಿಗಳು ಹೇಳಿದ್ದಾರೆ.

ಎರಡು ತಿಂಗಳ ಸಂಶೋಧನೆಯ ಬಳಿಕ ಸ್ಥಳೀಯ ನಾನಾಜಿ ಪಶುಸಂಗೋಪನಾ ವಿಜ್ಞಾನ ವಿಶ್ವವಿದ್ಯಾಲಯವು ಜಾನುವಾರುಗಳಿಗಾಗಿ ಬಹುಪೋಷಕಾಂಶ ಮತ್ತು ಜೀವಸತ್ವವುಳ್ಳ ಚಾಕೋಲೆಟ್‌ ಅಭಿವೃದ್ಧಿಪಡಿಸಿದೆ. ಹಸಿರು ಮೇವು ಅಲಭ್ಯವಿದ್ದಾಗ, ಪರ್ಯಾಯವಾಗಿ ಇದನ್ನು ಬಳಸಬಹುದು ಎಂದು ಕುಲಪತಿ ಎಸ್‌.ಪಿ.ತಿವಾರಿ ತಿಳಿಸಿದರು.

ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಮೇವುಗಳಿಗೆ ಒದಗಿಸಲು ರಾಜ್ಯದಾದ್ಯಂತ ರೈತರಿಗೆ ಶೀಘ್ರದಲ್ಲೇ ಪೂರೈಸಲಾಗುವುದು. ಅಲ್ಲದೆ, ಚಾಕೋಲೆಟ್ ಉತ್ಪಾದನೆಗೆ ಸ್ಟಾರ್ಟ್‌ ಅಪ್‌ ಆರಂಭಿಸಲು ಮುಂದಾಗುವ ಪಶುಸಂಗೋಪನೆ ಕೋರ್ಸ್‌ ಪದವೀಧರರಿಗೆ ತಂತ್ರಜ್ಞಾನ ಒದಗಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಈ ಚಾಕೋಲೆಟ್‌ ಜಾನುವಾರುಗಳಲ್ಲಿ ಹಾಲಿನ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲಿದೆ. ಜಾನುವಾರುಗಳ ಸಂತತಿ ವೃದ್ಧಿಗೂ ಕಾರಣವಾಗಲಿದೆ. ಅತ್ಯಧಿಕ ಪ್ರೊಟೀನ್‌ ಮತ್ತು ಜೀವಸತ್ವಗಳುಳ್ಳ ಈ ಚಾಕೋಲೆಟ್‌ ಅನ್ನು ನೇರವಾಗಿ ಅಥವಾ ಇತರೆ ಮೇವುಗಳ ಜೊತೆಗೆ ಮಿಶ್ರಣ ಮಾಡಿಯೂ ನೀಡಬಹುದಾಗಿದೆ ಎಂದು ವಿವರಿಸಿದರು.

ಪ್ರತಿ ಚಾಕೋಲೆಟ್ ತೂಕ 500 ಗ್ರಾಂ ಆಗಿದ್ದು, ದರ ₹ 25 ನಿಗದಿಪಡಿಸಲಾಗಿದೆ. ಸಾಂಪ್ರದಾಯಿಕವಾಗಿ ಜಾನುವಾರುಗಳಿಗೆ ನೀಡಲಾಗುವ ಸಾಸಿವೆ ಹಿಟ್ಟು, ಭತ್ತದ ಹೊಟ್ಟು, ಕಾಕಂಬಿ, ಗಂಜಿ, ಉಪ್ಪು, ನಿಂಬೆ ಪೌಡರ್‌ ಅನ್ನು ಬಳಸಿ ಇದನ್ನು ಉತ್ಪಾದಿಸಲಾಗಿದೆ.

ಚಾಕೋಲೆಟ್‌ ಉತ್ಪಾದನೆಗೆ ಪೂರಕವಾಗಿ ಮರದ ಅಚ್ಚನ್ನೂ ವಿ.ವಿ. ವಿನ್ಯಾಸಗೊಳಿಸಿದೆ. ಸದ್ಯ, 500 ಚಾಕೋಲೆಟ್ ಅನ್ನು ಉತ್ಪಾದಿಸಲಾಗಿದೆ. ಸರ್ಕಾರಕ್ಕೆ ಪತ್ರ ಬರೆದಿದ್ದು, ಅನುಮೋದನೆ ದೊರೆತ ಕೂಡಲೇ ಉತ್ಪನ್ನವು ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.