ADVERTISEMENT

ಪಿಪಿಇ ಕಿಟ್‌ ತೊಳೆದು ಮರು ಮಾರಾಟ; ವಿಲೇವಾರಿ ಘಟಕದ ವಿಡಿಯೊ ವೈರಲ್‌

ಏಜೆನ್ಸೀಸ್
Published 28 ಮೇ 2021, 8:35 IST
Last Updated 28 ಮೇ 2021, 8:35 IST
ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು–ಸಾಂದರ್ಭಿಕ ಚಿತ್ರ
ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು–ಸಾಂದರ್ಭಿಕ ಚಿತ್ರ   

ಭೋಪಾಲ್‌: ಕೋವಿಡ್‌–19 ವಾರ್ಡ್‌ಗಳಲ್ಲಿ ಬಳಸಲಾಗಿರುವ ಪಿಪಿಇ ಕಿಟ್‌ಗಳು ಮತ್ತು ಕೈಗವಸುಗಳನ್ನು ತೊಳೆದು ಮರು ಮಾರಾಟಕ್ಕೆ ಸಿದ್ಧತೆ ನಡೆಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಮಧ್ಯ ಪ್ರದೇಶದ ಜೈವಿಕ ಮತ್ತ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಕಂಪನಿಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಸತನಾ ಜಿಲ್ಲೆಯ ಹಲವು ಆಸ್ಪತ್ರೆಗಳ ಕೋವಿಡ್‌ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಬಳಸಿರುವ ಪಿಪಿಇ ಕಿಟ್‌ಗಳನ್ನು ಮರು ಮಾರಾಟ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಡೊ ವಾಟರ್ ಮ್ಯಾನೇಜ್ಮೆಂಟ್‌ ಆ್ಯಂಡ್‌ ಪಲ್ಯೂಶನ್ ಕಂಟ್ರೋಲ್‌ ಕಾರ್ಪೊರೇಷನ್‌ ಸಂಸ್ಥೆಯು ಬಳಕೆ ಮಾಡಿರುವ ಪಿಪಿಇ ಕಿಟ್‌ಗಳು, ಕೈಗವಸುಗಳನ್ನು ಸ್ವಚ್ಛಗೊಳಿಸಿ ಇತರೆ ಜಿಲ್ಲೆಗಳಿಗೆ ಮಾರಾಟಕ್ಕೆ ಕಳುಹಿಸಿರುವುದು ತಿಳಿದು ಬಂದಿದೆ. ಸಂಸ್ಥೆಯ ವಿಲೇವಾರಿ ಘಟಕದಲ್ಲಿ ಪಿಪಿಇ ಕಿಟ್‌ಗಳನ್ನು ತೊಳೆದು, ಪ್ಯಾಕ್‌ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ADVERTISEMENT

ಬಳಸಿದ ಪಿಪಿಇ ಕಿಟ್‌ಗಳನ್ನು ವಿಲೇವಾರಿ ಮಾಡಲು ಒಂದು ಕಿಟ್‌ಗೆ ₹10ರಂತೆ ಸಂಸ್ಥೆಯು ನಿತ್ಯ ಕನಿಷ್ಠ 1,000 ಕಿಟ್‌ಗಳನ್ನು ತರಿಸಿಕೊಳ್ಳುತ್ತಿದೆ. 'ಬಿಸಿ ನೀರು ವೈರಸ್‌ನ್ನು ಕೊಲ್ಲುತ್ತದೆ ಎಂದು ಕೆಲಸಗಾರರಿಗೆ ಹೇಳಿ, ಪಿಪಿಇ ಕಿಟ್‌ಗಳನ್ನು ತುಂಡರಿಸುವ ಬದಲು ತೊಳೆಯುವಂತೆ ತಿಳಿಸಿದೆ' ಎಂದು ಸಂಸ್ಥೆಯ ಕೆಲಸಗಾರರೊಬ್ಬರು ತಿಳಿಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೊ ಹರಿದಾಡುತ್ತಿದ್ದಂತೆ ಮಧ್ಯ ಪ್ರದೇಶ ಆರೋಗ್ಯ ಇಲಾಖೆಯು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದ್ದು, ವಿಚಾರಣೆ ನಡೆಸುವಂತೆ ಕೇಳಿದೆ.

ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆಯ ನಿರ್ದೇಶಕ, 'ವಿಡಿಯೊದಲ್ಲಿ ತಪ್ಪಾಗಿ ವಿಷಯ ಅರ್ಥೈಸಲಾಗಿದೆ. ಪಿಪಿಇ ಕಿಟ್‌ಗಳನ್ನು ತುಂಡರಸಿ ವಿಲೇವಾರಿ ಮಾಡುವುದಕ್ಕೂ ಮುನ್ನ ನಾವು ಅವನ್ನು ತೊಳೆಯುತ್ತೇವೆ. ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿಲ್ಲ. ವಿಲೇವಾರಿಗೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.