ADVERTISEMENT

ತಮಿಳುನಾಡಿನಲ್ಲಿ ಆರ್‌ಎಸ್‌ಎಸ್‌ ಯಾತ್ರೆಗೆ ಮದ್ರಾಸ್‌ ಹೈಕೋರ್ಟ್‌ ಒಪ್ಪಿಗೆ

ಪಿಟಿಐ
Published 10 ಫೆಬ್ರುವರಿ 2023, 13:43 IST
Last Updated 10 ಫೆಬ್ರುವರಿ 2023, 13:43 IST
.
.   

ಚೆನ್ನೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ತಮಿಳುನಾಡಿನಲ್ಲಿ ಆಯೋಜಿಸಿರುವ ಯಾತ್ರೆಗೆ ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ಇದೇ ಸಂದರ್ಭದಲ್ಲಿ, ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಪ್ರತಿಭಟನೆಗಳು ಅವಶ್ಯಕ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

‘ಶಾಂತಿಯುತ ಯಾತ್ರೆ ನಡೆಸಲು ಮೂರು ದಿನಾಂಕಗಳನ್ನು ಗುರುತಿಸಿ ರಾಜ್ಯದ ಅಧಿಕಾರಿಗಳಿಗೆ ನೀಡಬೇಕು. ಈ ಪೈಕಿ ಒಂದು ದಿನಾಂಕದಂದು ಯಾತ್ರೆ ನಡೆಸಲು ಅಧಿಕಾರಿಗಳು ಅವಕಾಶ ನೀಡಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ನ್ಯಾಯಾಲಯ ಸೂಚಿಸಿದೆ.

ಹಾಗೆಯೇ, ಯಾತ್ರೆ ವೇಳೆ ಶಿಸ್ತು ಕಾಪಾಡಬೇಕು, ಪ್ರಚೋದನೆ ಇರಕೂಡದು ಎಂದೂ ಆರ್‌ಎಸ್‌ಎಸ್‌ಗೆ ಸೂಚಿಸಿದೆ.

ADVERTISEMENT

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್‌.ಮಹದೇವನ್‌ ಮತ್ತು ಮಹಮ್ಮದ್ ಸಫೀಕ್‌ ಅವರನ್ನು ಒಳಗೊಂಡ ನ್ಯಾಯಪೀಠವು, ‘ರಾಜ್ಯದ ಅಧಿಕಾರಿಗಳು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕನ್ನು ಎತ್ತಿಹಿಡಿಯುವಂತೆ ಕೆಲಸ ಮಾಡಬೇಕು’ ಎಂದು ಹೇಳಿತು.

ಅ.2ರಂದು ತಮಿಳುನಾಡಿನ ವಿವಿಧ ಕಡೆಗಳಲ್ಲಿ ಯಾತ್ರೆ ನಡೆಸಲು ಆರ್‌ಎಸ್‌ಎಸ್‌ ತೀರ್ಮಾನಿಸಿತ್ತು. ನ.4ರಂದು ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠವು ಹಲವು ಷರತ್ತುಗಳನ್ನು ವಿಧಿಸಿತ್ತು. ಬಳಿಕ ಆರ್‌ಎಸ್ಎಸ್‌ ಯಾತ್ರೆಯನ್ನು ರದ್ದುಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.