ಮದ್ರಾಸ್ ಹೈಕೋರ್ಟ್
ಚೆನ್ನೈ: ತಮಿಳುನಾಡಿನ ‘ವಿಕಟನ್’ ವೆಬ್‌ಸೈಟ್ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯನ್ನು ಟೀಕಿಸುವ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ್ದಕ್ಕೆ ಕೇಂದ್ರ ಸರ್ಕಾರವು ವೆಬ್‌ಸೈಟ್ ಮೇಲೆ ನಿರ್ಬಂಧ ವಿಧಿಸಿತ್ತು. ಭಾರತದಲ್ಲಿರುವ ಓದುಗರಿಗೆ ವೆಬ್‌ಸೈಟ್ ವೀಕ್ಷಿಸಲು ಸಾಧ್ಯವಾಗದಂತೆ ಮಾಡಲಾಗಿತ್ತು. ಆದರೆ, ವಿದೇಶದಲ್ಲಿರುವ ಚಂದಾದಾರರು ವೆಬ್‌ಸೈಟ್ ವೀಕ್ಷಿಸಲು ಅವಕಾಶವಿತ್ತು.
ವ್ಯಂಗ್ಯಚಿತ್ರವನ್ನು ತೆಗೆದುಹಾಕಲು ‘ವಿಕಟನ್’ ಒಪ್ಪಿರುವುದರಿಂದ ವೆಬ್‌ಸೈಟ್ ಮೇಲಿನ ನಿರ್ಬಂಧ ತೆಗೆದುಹಾಕುವಂತೆ ನ್ಯಾಯಮೂರ್ತಿಗಳಾದ ಡಿ. ಭರತ ಚಕ್ರವರ್ತಿ ಅವರು ಮಧ್ಯಂತರ ಆದೇಶದಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಕೇಂದ್ರ ಸರ್ಕಾರವು ವೆಬ್‌ಸೈಟ್‌ಅನ್ನು (www.vikatan.com) ಫೆ.15ರಂದು ನಿರ್ಬಂಧ ವಿಧಿಸಿತ್ತು. 15 ದಿನಗಳು ಕಳೆದರೂ ನಿರ್ಬಂಧವನ್ನು ತೆಗೆದುಹಾಕದ ಕಾರಣ ‘ವಿಕಟನ್’ ಮಾಲೀಕರು ಕಳೆದ ವಾರ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು.
‘ವಿಕಟನ್’ ಪ್ರಕಟಿಸಿದ್ದ ವ್ಯಂಗ್ಯಚಿತ್ರದ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.