ಚೆನ್ನೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಬಗ್ಗೆ ಹಾಸ್ಯ ಮಾಡಿದ ಆರೋಪದಲ್ಲಿ ಪ್ರಕರಣ ಎದುರಿಸುತ್ತಿರುವ ಹಾಸ್ಯ ಕಲಾವಿದ ಕುನಾಲ್ ಕಾಮ್ರಾಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಮಧ್ಯಂತ್ಯರ ನಿರೀಕ್ಷಣಾ ಜಾಮೀನು ನೀಡಿದೆ.
ವಿಲ್ಲುಪುರಂ ಜಿಲ್ಲೆಯ ವನೂರ್‌ನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ಸಮಾಧಾನ ಎನಿಸುವ ಮೊತ್ತದ ಬಾಂಡ್ ಹಾಜರುಪಡಿಸಬೇಕು ಎಂಬ ಷರತ್ತಿನೊಂದಿಗೆ ನ್ಯಾಯಾಲಯ ಕಾಮ‍್ರಾ ಅವರಿಗೆ ಜಾಮೀನು ಮಂಜೂರು ಮಾಡಿತು. ಪ್ರಕರಣದಲ್ಲಿ ಎರಡನೇ ಪ್ರತಿವಾದಿಯಾದ ಖಾರ್ ಪೊಲೀಸರಿಗೆ ಇದೇ ವೇಳೆ ನೋಟಿಸ್ ಜಾರಿ ಮಾಡಿತು.
2021ರಿಂದ ತಾನು ತಮಿಳುನಾಡಿನ ನಿವಾಸಿಯಾಗಿದ್ದೇನೆ ಎನ್ನುವುದನ್ನೂ ಕಾಮ್ರಾ ಕೋರ್ಟ್‌ಗೆ ತಿಳಿಸಿದ್ದಾರೆ.
ವಿಲ್ಲುಪುರಂ ಜಿಲ್ಲೆಯಲ್ಲಿ ವಾಸಿಸುತ್ತಿರುವ ಅರ್ಜಿದಾರರು (ಕಾಮ್ರಾ) ದಾಖಲಾಗಿರುವ ಪ್ರಕರಣದಲ್ಲಿ ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ನ್ಯಾಯಾಧೀಶರು ಗಮನಿಸಿದರು.
ನಯಾ ಭಾರತ್ ಎನ್ನುವ ಹಾಸ್ಯ ಪ್ರದರ್ಶನದಲ್ಲಿ ಉಪಮುಖ್ಯಮಂತ್ರಿ ಬಗ್ಗೆ ಕೆಲವು ಹೇಳಿಕೆ ನೀಡಿದ್ದಾರೆ ಎನ್ನುವುದು ಅರ್ಜಿದಾರರ ವಿರುದ್ಧ ಇರುವ ಆರೋಪ ಎಂದು ಕಾಮ್ರಾ ಪರ ವಕೀಲರು ಕೋರ್ಟ್‌ಗೆ ತಿಳಿಸಿದರು. ಆದರೆ ಇದು ಶಿಂದೆಯವರ ಖ್ಯಾತಿಗೆ ಧಕ್ಕೆ ತಂದಿದೆ ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತು.
ಈ ಆರೋಪವು ಕಸ್ಟಡಿ ವಿಚಾರಣೆಗೆ ಅರ್ಹವಲ್ಲ. ಸಚಿವರು ಹಾಗೂ ಕಾರ್ಯಕರ್ತರು ಜೀವ ಬೆದರಿಕೆ ಹಾಕಿದ್ದರಿಂದ ಅರ್ಜಿದಾರರು ಮಹಾರಾಷ್ಟ್ರದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಸಾಧ್ಯವಾಗಲಿಲ್ಲ ಎನ್ನುವುದನ್ನು ವಕೀಲರು ನ್ಯಾಯಾಮೂರ್ತಿಗಳಿಗೆ ಅರಿಕೆ ಮಾಡಿದರು.
ಅರ್ಜಿದಾರರು ಮಹಾರಾಷ್ಟ್ರದ ನ್ಯಾಯಾಲಯವನ್ನು ತಕ್ಷಣವೇ ಸಂಪರ್ಕಿಸಲು ಸಾಧ್ಯವಾಗದು ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.