ADVERTISEMENT

ತಮ್ಮನ ಮಕ್ಕಳಿಗೆ ಜಯಲಲಿತಾ ಅವರ ‘ವೇದ ನಿಲಯಂ': ಮದ್ರಾಸ್ ಹೈಕೋರ್ಟ್ ಆದೇಶ

ಪ್ರಜಾವಾಣಿ ವಿಶೇಷ
Published 24 ನವೆಂಬರ್ 2021, 12:45 IST
Last Updated 24 ನವೆಂಬರ್ 2021, 12:45 IST
ಜಯಲಲಿತಾ: ಪಿಟಿಐ ಚಿತ್ರ
ಜಯಲಲಿತಾ: ಪಿಟಿಐ ಚಿತ್ರ   

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಚೆನ್ನೈನ ಪೋಯಸ್ ಗಾರ್ಡನ್‌ನ ‘ವೇದ ನಿಲಯಂ' ಬಂಗಲೆಯನ್ನು ವಶಪಡಿಸಿಕೊಂಡು ಸ್ಮಾರಕವನ್ನಾಗಿ ಪರಿವರ್ತಿಸುವ ಹಿಂದಿನ ಎಐಎಡಿಎಂಕೆ ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ.

ಎಡಪ್ಪಾಡಿ ಕೆ ಪಳನಿಸ್ವಾಮಿ ಸರ್ಕಾರದ ಆದೇಶವನ್ನು ವಜಾ ಮಾಡಿದ ಹೈಕೋರ್ಟ್, ಜಯಲಲಿತಾ ಅವರ ಸಹೋದರ ಜಯಕುಮಾರ್ ಅವರ ಮಕ್ಕಳಾದ ದೀಪಾ ಮತ್ತು ದೀಪಕ್ ಅವರಿಗೆ ಬಂಗಲೆಯನ್ನು ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದೆ.

ಜಯಲಲಿತಾ ಯಾವುದೇ ಉಯಿಲು ಬರೆದಿಡದ ಕಾರಣ 2020ರಲ್ಲಿ ದೀಪಾ ಮತ್ತು ದೀಪಕ್ ಅವರನ್ನು ಜಯಲಲಿತಾ ಅವರ ಅಧಿಕೃತ ಉತ್ತರಾಧಿಕಾರಿಗಳೆಂದು ಮದ್ರಾಸ್ ಹೈಕೋರ್ಟ್ ಘೋಷಿಸಿತ್ತು. ಬಳಿಕ ಅಂದಿನ ಎಐಎಡಿಎಂಕೆ ಸರ್ಕಾರವು ದೀಪಾ ಮತ್ತು ದೀಪಕ್ ಅವರ ಇಚ್ಛೆಗೆ ವಿರುದ್ಧವಾಗಿ ಬಂಗಲೆಯನ್ನು ವಶಕ್ಕೆ ಪಡೆದಿತ್ತು.

ಬಂಗಲೆ ವಶಪಡಿಸಿಕೊಂಡಿದ್ದನ್ನು ಪ್ರಶ್ನಿಸಿ ದೀಪಾ ಮತ್ತು ದೀಪಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ADVERTISEMENT

ಜಯಲಲಿತಾ ಸುಮಾರು 50 ವರ್ಷಗಳ ಕಾಲ ವಾಸವಿದ್ದ ಮನೆಯನ್ನು 1960ರ ದಶಕದಲ್ಲಿ ಅವರ ತಾಯಿ ಸಂಧ್ಯಾ ಖರೀದಿಸಿದ್ದರು. 2016ರಲ್ಲಿ ಜಯಲಲಿತಾ ನಿಧನದ ಬಳಿಕ ಅಂದಿನ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಂಕೆ ಸರ್ಕಾರವು, ಮನೆಯನ್ನು ವಶಪಡಿಸಿಕೊಂಡು ಸ್ಮಾರಕವಾಗಿ ಪರಿವರ್ತಿಸುವುದಾಗಿ ಘೋಷಿಸಿತ್ತು. ಇದು ಪಕ್ಷದ ಕೋಟ್ಯಂತರ ಕಾರ್ಯಕರ್ತರ ಇಚ್ಛೆಯಾಗಿದೆ. ಸ್ಮಾರಕ ನಿರ್ಮಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದಿತ್ತು.

ಈಗ ಬಂಗಲೆಯ ಮೌಲ್ಯ ಸುಮಾರು ₹100 ಕೋಟಿಗಳಾಗಿದ್ದು, 1967ರಲ್ಲಿ ಜಯಲಲಿತಾ ಅವರ ತಾಯಿ ಸಂಧ್ಯಾ ₹ 1.32 ಲಕ್ಷಕ್ಕೆ ಖರೀದಿಸಿದ್ದರು. ಮನೆಯ ಮುಂಭಾಗವನ್ನಷ್ಟೇ ಸಂಧ್ಯಾ ಅವರು ಖರೀದಿಸಿದ್ದರು. ಬಳಿಕ, ಪಕ್ಕದಲ್ಲಿದ್ದ ಜಾಗಗಳನ್ನು ಖರೀದಿಸಿದ್ದ ಜಯಲಲಿತಾ ಮನೆಯನ್ನು ವಿಸ್ತರಣೆ ಮಾಡಿದ್ದರು.

ಜಯಲಲಿತಾ ಅವರಿಗೆ ಪೋಯಸ್ ಗಾರ್ಡನ್ ನಿವಾಸವು ಮನೆಗಿಂತ ಹೆಚ್ಚೇ ಆಗಿತ್ತು. ಪುಸ್ತಕ ಪ್ರೇಮಿಯಾಗಿದ್ದ ಅವರು ಸುಮಾರು 8,000 ಪುಸ್ತಕಗಳ ಗ್ರಂಥಾಲಯ ನಿರ್ಮಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.